

ನ್ಯಾಮತಿ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ (ಸರ್ಕಾರಿ ಪದವಿಪೂರ್ವ ಕಾಲೇಜು)ಗೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಶುಕ್ರವಾರ ನೂತನ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.
ಸಮಿತಿಯ ಅಧ್ಯಕ್ಷ ಕರಿಬಸಪ್ಪ ಮಾತನಾಡಿ, ಕೆಪಿಎಸ್ ಶಾಲೆಯಲ್ಲಿ ಎಲ್‌ಕೆಜಿ, ಪೂರ್ವಪ್ರಾಥಮಿಕ ಶಾಲೆಯಿಂದ ಪಿಯುಸಿ ವರೆಗೂ ಶಿಕ್ಷಣ ನೀಡಲಾಗುತ್ತಿದೆ. ಸುಮಾರು 1500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೊಠಡಿಗಳು, ಶೌಚಗೃಹಗಳ ಕೊರತೆ ಮತ್ತಿತರ ಸಮಸ್ಯೆಗಳಿವೆ ಎಂದು ಆರೋಪಿಸಿದರು.
ಪದವಿಪೂರ್ವ ಕಾಲೇಜಿನ ಹಳೇ ಕಟ್ಟಡ ಶಿಥಿಲಗೊಂಡಿದ್ದು, ಅಲ್ಲಿ ತರಗತಿ ನಡೆಸಲು ಯೋಗ್ಯವಾಗಿಲ್ಲ ಎಂಬುದಾಗಿ ಇಲಾಖೆಯವರು ವರದಿ ನೀಡಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲೆಗಳು ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳ ಸಂಖ್ಯೆಕ್ಕೆ ತಕ್ಕಂತೆ ಕೊಠಡಿಗಳು ಮತ್ತು ಮೂಲಸೌಕರ್ಯಗಳು ಹೆಚ್ಚಾಗಬೇಕಿದೆ. ಕಾಲೇಜಿಗೆ ಸೌಕರ್ಯಗಳಿಗೆ ಸಂಸದರ ಅನುದಾನದಲ್ಲಿ ತುರ್ತಾಗಿ ಬಿಡುಗಡೆ ಮಾಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕಾಭಿವೃದ್ಧಿ ಮತ್ತು ಶಾಲೆಯ ಸುರಕ್ಷತೆಗೆ ಸಹಕರಿಸುವಂತೆ ಕೋರಿದರು.
ಕರ್ನಾಟಕ ಪಬ್ಲಿಕ್ ಶಾಲೆಯು ಎಂಟು ಎಕರೆ ಜಮೀನು ಹೊಂದಿದ್ದು, ಕಟ್ಟಡವು ಜಮೀನಿನ ಮಧ್ಯದಲ್ಲಿದೆ. ಆದರೆ, ಸುತ್ತಲು ಕಾಂಪೌಂಡ್ ಇರುವುದಿಲ್ಲ. ಕಾಲೇಜು ಮತ್ತು ವಿದ್ಯಾರ್ಥಿಗಳ ಕಲಿಕೆ, ಸುರಕ್ಷತೆ ದೃಷ್ಟಿಯಿಂದ ತಡೆಗೋಡೆ ನಿರ್ಮಿಸಬೇಕು. ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಗೃಹ ನಿರ್ಮಾಣ ಮಾಡಬೇಕು. ಕಾಲೇಜಿಗೆ ಸೌಕರ್ಯಗಳಿಗೆ ಸಂಸದರ ಅನುದಾನದಲ್ಲಿ ತುರ್ತಾಗಿ ಬಿಡುಗಡೆ ಮಾಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕಾಭಿವೃದ್ಧಿ ಮತ್ತು ಶಾಲೆಯ ಸುರಕ್ಷತೆಗೆ ಸಹಕರಿಸುವಂತೆ ಕೋರಿದರು.