

ಮರಿದೇವ ಹೂಗಾರ ಹುಬ್ಬಳ್ಳಿ
ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಅಪಾರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಒಂದರಿಂದ ಹತ್ತನೇ ತರಗತಿವರೆಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ 1,37,134 ಮಕ್ಕಳು ದಾಖಲಾಗಿದ್ದರೆ, ಈ ಬಾರಿ ಈ ಸಂಖ್ಯೆಯಲ್ಲಿ 5828 ಏರಿಕೆ ಕಂಡುಬಂದಿದೆ.
ಕರೊನಾ ಹಿನ್ನೆಲೆಯಲ್ಲಿ 1ರಿಂದ 10ನೇ ತರಗತಿ ವರೆಗೆ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ನಂತರ ಶಾಲೆಗಳಲ್ಲಿ ವಿದ್ಯಾಗಮ, ಆನ್ಲೈನ್ ತರಗತಿಗಳು ಆರಂಭವಾದವು. ಕರೊನಾ ಲಾಕ್ಡೌನ್ ಹಾಗೂ ಆರ್ಥಿಕ ಹಿಂಜರಿಕೆಯ ಕಾರಣ ಮಕ್ಕಳ ಪಾಲಕರ ಆದಾಯದಲ್ಲಿ ಸಾಕಷ್ಟು ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 2019-20ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯ 848 ಸರ್ಕಾರಿ ಶಾಲೆಗಳಲ್ಲಿ 1,37,134 ಮಕ್ಕಳ ಸಂಖ್ಯೆ ಇತ್ತು. ಅನುದಾನಿತ 230 ಶಾಲೆಗಳಲ್ಲಿ 57,319, ಅನುದಾನ ರಹಿತ 440 ಶಾಲೆಗಳಲ್ಲಿ 1,25,971 ವಿದ್ಯಾರ್ಥಿಗಳ ಸಂಖ್ಯೆ ದಾಖಲಾಗಿತ್ತು. 2020-21ನೇ ಸಾಲಿನಲ್ಲಿ 848 ಸರ್ಕಾರಿ ಶಾಲೆಗಳಲ್ಲಿ 1,42,962, ಅನುದಾನಿತ 230 ಶಾಲೆಗಳಲ್ಲಿ 57,200, ಅನುದಾನ ರಹಿತ 440 ಶಾಲೆಗಳಲ್ಲಿ 1,30,353 ವಿದ್ಯಾರ್ಥಿಗಳ ಹೆಸರು ದಾಖಲಾಗಿದೆ.
5,81,609 ಪಠ್ಯಪುಸ್ತಕ ವಿತರಣೆ: 2020-21ನೇ ಸಾಲಿನಲ್ಲಿ ಧಾರವಾಡ ಜಿಲ್ಲಾದ್ಯಂತ 5,81,609 ಪಠ್ಯಪುಸ್ತಕಗಳು ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮಕ್ಕಳಿಗೆ ವಿತರಣೆಯಾಗಿವೆ. ಈ ಮೂಲಕ ಶೇ. 94ರಷ್ಟು ಸಾಧನೆ ಮಾಡಿ ದಾಖಲೆ ನಿರ್ವಣವಾಗಿದೆ. ಇದರಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಯ ಮಕ್ಕಳೂ ಸೇರಿದ್ದಾರೆ.
ನಮ್ಮ ಶಿಕ್ಷಕರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಿದ್ದೇವೆ. ಹಾಗಾಗಿ ಮಕ್ಕಳ ದಾಖಲಾತಿ ಪ್ರಮಾಣ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಳವಾಗಿದೆ. | ಮೋಹನಕುಮಾರ ಹಂಚಾಟೆ ಡಿಡಿಪಿಐ