

ಶಿವಮೊಗ್ಗ: ನಂದಿಬೆಟ್ಟದಲ್ಲಿ ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಗೆ 307.80 ಕೋಟಿ ರೂ. ಮೊತ್ತದ ಹಲವು ಯೋಜನೆಗಳ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಸೊರಬ ತಾಲೂಕಿನ ದಂಡಾವತಿ ಚೆಕ್ ಡ್ಯಾಂನ ಮಾರ್ಪಡಿತ 168.80 ಕೋಟಿ ರೂ. ವೆಚ್ಚದ ಯೋಜನೆ ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿದ್ದು, ರೈತರ ಜಮೀನು ಮುಳುಗಡೆಗೊಳಿಸದೆ ಹಾಗೂ ಒಕ್ಕಲೆಬ್ಬಿಸದೆ ಅನುಷ್ಠಾನಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೊರಬ ತಾಲೂಕಿನಲ್ಲಿ ದಂಡಾವತಿ ನದಿಗೆ ಅಡ್ಡಲಾಗಿ ಆಯ್ದ ಸ್ಥಳಗಳಲ್ಲಿ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಿಸಿ 34 ಕೆರೆಗಳಿಗೆ ನೀರು ತುಂಬಿಸುವ 165.20 ಕೋಟಿ ರೂ. ಯೋಜನೆ, ಕೆರೆಹಳ್ಳಿ ಗ್ರಾಮದ ಹತ್ತಿರ ವರದಾ ನದಿಗೆ ಅಡ್ಡಲಾಗಿ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸುವ 208.70 ಕೋಟಿ ರೂ. ಯೋಜನೆ, ಮಾವಿನಹೊಳೆ ಮತ್ತು ದಂಡಾವತಿ ನದಿಗೆ ಅಡ್ಡಲಾಗಿ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಪ್ರವಾಹ ನಿಯಂತ್ರಿಸಲು 187.30 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅಂದಾಜು ಪಟ್ಟಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಅನುಮೋದನೆ ಪಡೆಯಲಾಗುವುದು ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ರಾಜ್ಯ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದೀಗ ಅಡ್ವೊಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಲಾಗಿದೆ. 1,800ಕ್ಕೂ ಹೆಚ್ಚು ದಾಖಲಾತಿ ಸಲ್ಲಿಸಲಾಗಿದೆ. ಹಂತ ಹಂತವಾಗಿ ಸಂತ್ರಸ್ತರಿಗೆ ಸಂಪೂರ್ಣ ನ್ಯಾಯ ಒದಗಿಸಲಾಗುವುದು. - ಮಧು ಬಂಗಾರಪ್ಪ,ಜಿಲ್ಲಾ ಉಸ್ತುವಾರಿ ಸಚಿವ