

ಸಿಂಧನೂರು: ತಾಲೂಕಿನ ಸಾಲಗುಂದ ಗ್ರಾಮದ ಹತ್ತಿರ ತುಂಗಭದ್ರಾ ನದಿಯಿಂದ ನೀರೆತ್ತುವುದು ಹಾಗೂ ಮುಳ್ಳೂರು ಬಳಿ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಗುರುವಾರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದ್ದಾರೆ.
ಸಾಲಗುಂದ ಗ್ರಾಮದ ಹತ್ತಿರ ತುಂಗಭದ್ರಾ ನದಿಯಿಂದ ನೀರೆನ್ನೆತ್ತಿ ತುಂಗಭದ್ರಾ ಎಡದಂಡೆ ಕಾಲುವೆಯ ಡಿ-32 ಮತ್ತು ಡಿ-26 ವ್ಯಾಪ್ತಿಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು 178 ಕೋಟಿ ರೂ. ಅಂದಾಜು ಮೊತ್ತದ ಸಾಲಗುಂದ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಮುಳ್ಳೂರು ಗ್ರಾಮದ ಬಳಿ ಸಿಂಧನೂರು ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಿ ತುಂಗಭದ್ರಾ ಎಡದಂಡೆ ನಾಲೆಯ ಉಪ ವಿತರಣಾ ಕಾಲುವೆ 53/3 ಆರ್‌ರಡಿ ಬಾಧಿತ ಆಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸುವ 29 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಬಾದರ್ಲಿ ತಿಳಿಸಿದ್ದಾರೆ.