

ಲಿಂಗಸುಗೂರು: ಕ್ರಾಂತಿಯ ಬದಲಾಗಿ ಶಾಂತಿಯುತ ಬದಲಾವಣೆ ಭಾರತದಲ್ಲಿ ಬರಬೇಕು ಎಂದು ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಎನ್.ಸಂತೋಷ ಹೆಗ್ಡೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನ್ಯಾಯಾಧೀಶರು ಹಾಗೂ ವಕೀಲರ ಸಂಘದಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಆಡಳಿತ ವ್ಯವಸ್ಥೆಯಲ್ಲಿ ದುರಾಸೆ ಮನೆ ಮಾಡಿದೆ. ಇದರಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ. ಚೀನಾದಲ್ಲಿ ಭ್ರಷ್ಟಾಚಾರ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲಿ ಭಾರತಕ್ಕಿಂತ ಹೆಚ್ಚು ಭ್ರಷ್ಟಾಚಾರ ನಡೆಯುತ್ತದೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಹೇಳುತ್ತದೆ. ಕ್ರಾಂತಿಯಿಂದ ಬದಲಾಯಿಸಲು ಹೊರಟರೆ ದೇಶ ಇನ್ನೂ ವಿಭಜನೆಯಾಗುವ ಸಾಧ್ಯತೆಯಿದೆ.
ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಲು ಪೂರ್ವಜರು ಕಟ್ಟಿದ ಸಮಾಜ ಮರುಕಳಿಸಬೇಕು. ತೃಪ್ತಿಯ ಬದುಕು ಮೈಗೂಡಿಸಿಕೊಳ್ಳಬೇಕು. ಇದರ ಪ್ರಯತ್ನವಾಗಿ ಈವರೆಗೆ 1,846 ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ್ದೇನೆ. ಯುವಕರಿಗೆ ಜಾಗೃತಿಯ ಅವಶ್ಯಕತೆಯಿದೆ. ಉಜ್ವಲ ಭವಿಷ್ಯ ರೂಪಸಿಕೊಳ್ಳುವ ಕನಸು ಕಾಣಬೇಕು. ಆದರೆ ಲಂಚದ ಮೂಲಕ ನೌಕರಿ ಪಡೆದು ಹಣ ಸಂಪಾದಿಸುವುದು ಸರಿಯಾದ ಮಾರ್ಗವಲ್ಲ.
ಕಾನೂನು ಚೌಕಟ್ಟಿನಲ್ಲಿ ಸಂಪಾದಿಸುವವನು ಮಾತ್ರ ನೆಮ್ಮದಿಯಿಂದ ನಿದ್ರಿಸುತ್ತಾನೆ. ಭ್ರಷ್ಟಾಚಾರಿಗೆ ಕಾನೂನಿನ ಭಯವಿರುತ್ತದೆ. ಎಲ್ಲದಕ್ಕೂ ಬದಲಾವಣೆ ಬಂದೇ ಬರುತ್ತದೆ.
ಮೂಡಾ ಹಗರಣದಲ್ಲಿ ನ್ಯಾಯಾಂಗಕ್ಕೆ ಬೆಲೆ ಕೊಡಬೇಕು. ಹೈಕೋರ್ಟ್ ನಿರ್ದೇಶನದಂತೆ ತನಿಖೆ ನಡೆಯಲೇಬೇಕು. ಲೋಕಾಯುಕ್ತಕ್ಕೆ ಶಿಕ್ಷೆ ಕೊಡುವ ಅವಕಾಶವಿಲ್ಲ. ಆದರೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಈಗಿರುವ ಅಧಿಕಾರ ಸಾಕು. ಹಿಂದೆ ಉತ್ತಮ ಕೆಲಸಕ್ಕೆ ಸಮಾಜ ಪುರಸ್ಕರಿಸಿದೆ. ಇಂದು ಜೈಲಿನಿಂದ ಜಾಮೀನಿನ ಮೇಲೆ ಹೋರ ಬಂದವರಿಗೆ ಸ್ವಾಗತಿಸಲು ತೆರಳುತ್ತಾರೆ. ಜೈಲು ಶಿಕ್ಷೆಗೆ ಇಂದು ಯಾರೂ ಹೆದರಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.