ಅಧಿಕಾರ ಹಸ್ತಾಂತರ ಪ್ರಹಸನದಿಂದ ಆಡಳಿತ ಸ್ತಬ್ಧ

ಬಿಜೆಪಿ ತರಬೇತಿ ವರ್ಗವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ರಾಜೇಶ್ ನಾಯ್ಕ್, ಡಾ. ವೈ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಯಶ್‌ಪಾಲ್ ಸುವರ್ಣ ಉಪಸ್ಥಿತರಿದ್ದರು.
ಬಿಜೆಪಿ ತರಬೇತಿ ವರ್ಗವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ರಾಜೇಶ್ ನಾಯ್ಕ್, ಡಾ. ವೈ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಯಶ್‌ಪಾಲ್ ಸುವರ್ಣ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಕೋಟ ಶ್ರೀನಿವಾಸ ಪೂಜಾರಿ ಟೀಕೆ
  • ಎರಡು ದಿನಗಳ ದ.ಕ. ಜಿಲ್ಲಾಮಟ್ಟದ ತರಬೇತಿ ವರ್ಗ
  • ಕೇಂದ್ರ ಸರ್ಕಾರ 22 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ
ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಅಧಿಕಾರ ಹಸ್ತಾಂತರ ಪ್ರಹಸನದಿಂದ ಆಡಳಿತ ಯಂತ್ರವೇ ಸ್ತಬ್ಧಗೊಂಡಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಜನತೆಗೆ ಮನವರಿಕೆ ಮಾಡುವುದು ಬಿಜೆಪಿ ಕಾರ್ಯಕರ್ತರ ಕರ್ತವ್ಯ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ತರಬೇತಿ ಮಹಾ ಅಭಿಯಾನದ ಅಂಗವಾಗಿ ಸೋಮವಾರ ನಗರದ ಸಂಘನಿಕೇತನದಲ್ಲಿ ಆರಂಭವಾದ ಎರಡು ದಿನಗಳ ದ.ಕ. ಜಿಲ್ಲಾಮಟ್ಟದ ತರಬೇತಿ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗ, ದಲಿತರ ಬಗ್ಗೆ ಕಾಂಗ್ರೆಸ್ ನಾಯಕರು ಸದಾ ಮಾತನಾಡುತ್ತಾರೆ. ಆದರೆ ರಾಜ್ಯದಲ್ಲಿ 1.5 ಲಕ್ಷ ದಲಿತ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಸ್ಟೆಲ್ ಇಲ್ಲದೆ ಪರದಾಡುತ್ತಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದ ಆರೋಗ್ಯ, ಶಿಕ್ಷಣಕ್ಕಾಗಿ ಮೀಸಲಿಟ್ಟ 60 ಸಾವಿರ ಕೋಟಿ ರೂ. ಹಣವನ್ನು ಸಿದ್ದರಾಮಯ್ಯ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿದೆ ಎಂದರು.
ಮೀನುಗಾರಿಕೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರ 22 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಈ ಯೋಜನೆಗಳು ರಾಜ್ಯ ಸರ್ಕಾರಕ್ಕೆ ಹಣ ಮಾಡುವ ದಂಧೆಯಾಗಿದೆ. ಕೇಂದ್ರ ಸರ್ಕಾರದ ಅನುದಾನವನ್ನು ರಾಜ್ಯ ಸರ್ಕಾರ ತನ್ನ ಹಣವೆಂದು ಬಿಂಬಿಸಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಬಿಜೆಪಿ ಕಾರ್ಯಕರ್ತರು ಜನಪರ ಹೋರಾಟಗಳ ಮೂಲಕ ಜನತೆಗೆ ಸತ್ಯಾಂಶ ತಿಳಿಸಬೇಕು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಪ್ರತಿ ಮಂಡಲ ಹಾಗೂ ಜಿಲ್ಲಾಮಟ್ಟದಲ್ಲಿ ತರಬೇತಿ ವರ್ಗ ನಡೆಸಲಾಗುತ್ತಿದೆ ಎಂದು ಸಂಸದ ಕೋಟ ಹೇಳಿದರು.
ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, 2014ರ ಬಳಿಕ ಭಾರತ ಬದಲಾಗಿದೆ. ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ ಎನ್ನುತ್ತಿದ್ದ ಪಶ್ಚಿಮ ಬಂಗಾಳದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮೇಲಿನ ಜನರ ಆಕ್ರೋಶಕ್ಕೆ ಧ್ವನಿಯಾಗಿ ಬಿಜೆಪಿ ಕಾರ್ಯನಿರ್ವಹಿಸಬೇಕು ಎಂದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ರಾಜೇಶ್ ನಾಯ್ಕ್, ಡಾ. ವೈ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಯಶ್‌ಪಾಲ್ ಸುವರ್ಣ, ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು, ತರಬೇತಿ ವಿಭಾಗ ಸಂಚಾಲಕ ಉದಯ ಕುಮಾರ್ ಶೆಟ್ಟಿ, ವಿಭಾಗ ಸಹಪ್ರಭಾರಿ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು.
ಜಿಲ್ಲಾ ತರಬೇತಿ ಮಹಾ ಅಭಿಯಾನ ಸಂಚಾಲಕ ಯತೀಶ್ ಆರ್ವಾರ್ ಸ್ವಾಗತಿಸಿ, ಸಹ ಸಂಚಾಲಕ ನಿತೀಶ್ ಕುಮಾರ್ ಶಾಂತಿವನ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾಕ್ರಾಚ್ ಪಾರ್ಟಿ ಎನ್ನುವ ಹೆಸರಿನಲ್ಲಿ ಬಿಜೆಪಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ನಡೆಯುತ್ತಿದೆ. ಜಿರಳೆಗಳಿಗೆ ಹೆದರುವ ಕಾಲ ಇದಲ್ಲ. ದೇಶದ ಚಿನ್ನವನ್ನು ವಿದೇಶಕ್ಕೆ ಅಡವಿಟ್ಟ ಕಾಲವೊಂದಿತ್ತು. ಇಂದು ಭಾರತ 60 ರಾಷ್ಟ್ರಗಳಿಗೆ ಸಾಲ ನೀಡುತ್ತಿದೆ. ಜಿರಳೆ, ಹೆಗ್ಗಣ, ಸೊಳ್ಳೆಗಳಿಗೆ ಹೆದರುವ ಪರಿಸ್ಥಿತಿ ಈಗ ಇಲ್ಲ.

— ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಉಡುಪಿ-ಚಿಕ್ಕಮಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net