

ಚಿಕ್ಕಮಗಳೂರು: ಜಡ್ಡುಗಟ್ಟಿದ ಆಡಳಿತಕ್ಕೆ ಬಿಸಿ ಮುಟ್ಟಿಸುತ್ತಿರುವ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್, ಬಾಕಿ ಕಡತಗಳನ್ನು ತ್ವರಿತವಾಗಿ ವಿಲೇ ಮಾಡುವ ಮೂಲಕ ಕಂದಾಯ ಇಲಾಖೆ ಮೇಲೆ ರೈತರಿಗೆ ಹೊಸ ಭರವಸೆ ಮೂಡುವಂತೆ ಮಾಡುತ್ತಿದ್ದಾರೆ.
ಹತ್ತಾರು ವರ್ಷಗಳಿಂದ ದೂಳು ಹಿಡಿದ ಕಡತಗಳಿಗೆ ವಿಲೇವಾರಿ ಮೋಕ್ಷ ನೀಡುತ್ತಿರುವ ಎಸಿಯಿಂದ ಉಪ ವಿಭಾಗ ವ್ಯಾಪ್ತಿಯ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ತಾಲೂಕಿನ ಕಂದಾಯ ಆಡಳಿತದಲ್ಲಿ ಸಂಚಲನ ಮೂಡತೊಡಗಿದೆ.
2006-07 ರತನಕ ಕಡತ ವಿಲೇವಾರಿ ಮಾಡಿಕೊಂಡುವಂತೆ ಉಪ ವಿಭಾಗಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದ ಬಡ ರೈತರ ಮೊಗದಲ್ಲಿ ಈಗ ಮಂದಹಾಸ ಕಾಣಿಸಿಕೊಳ್ಳುತ್ತಿದೆ. ಇದು ಕಂದಾಯ ಇಲಾಖೆಯೇ ಎಂಬ ಅನುಮಾನ, ಆಶ್ಚರ್ಯ ಸಹ ಉಂಟಾಗ ತೊಡಗಿದೆ.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಉಪ ವಿಭಾಗಾಧಿಕಾರಿ ಕಚೇರಿ ಈಗ ಬಾಕಿ ಕಡತ ವಿಲೇವಾರಿ ಮೂಲಕ ಜಿಲ್ಲೆಯಲ್ಲಿಯೇ ಸದ್ದು ಮಾಡತೊಡಗಿದೆ. ಕಾನೂನಿನ ಅರಿವಿನ ಕೊರತೆ ಇದ್ದು ಅಥವಾ ಇಲ್ಲದೆ ತಹಸೀಲ್ದಾರರು ಮಾಡಿದ ಅನೇಕ ತೀರ್ಪಿನ ಮೇಲ್ಮನವಿ ಕಡತಗಳು ದಶಕದ ನಂತರ ವಿಲೇವಾರಿಯಾಗತೊಡಗಿವೆ.
ಉಪ ವಿಭಾಗಾಧಿಕಾರಿ ಕಚೇರಿ ವ್ಯಾಪ್ತಿಯ ನಾಲ್ಕೂ ತಾಲೂಕಿನಲ್ಲಿ ಕಂದಾಯ ಇಲಾಖೆ ಕೆಲಸಕ್ಕೆ ಹತ್ತಾರು ವರ್ಷದಿಂದ ಅಲೆದಾಡುತ್ತಿದ್ದ ರೈತರು, ಸಾರ್ವನಿಕರು ಈಗ ನೆಮ್ಮದಿ ನಿಟ್ಟುಸಿರುವ ಬಿಡುವಂತಾಗಿದೆ.
ಕಳೆದ ಡಿಸೆಂಬರ್ನಲ್ಲಿ ಉಪ ವಿಭಾಗಾಧಿಕಾರಿಯಾಗಿ ಡಾ. ಎಚ್.ಎಲ್.ನಾಗರಾಜ್ ಆಗಮಿಸಿದಾಗ 1929 ತಹಸೀಲ್ದಾರ್ ನೀಡಿರುವ ತೀರ್ಪಿನ ಕಂದಾಯ ಮೇಲ್ಮನವಿಗಳ ಕಡತ ದೂಳು ಹಿಡಿದಿದ್ದವು. ಇದರ ಜತೆ 267 ಸಾಮಾನ್ಯ ಕಡತ ಬಾಕಿ ಉಳಿದುಕೊಂಡಿದ್ದವು.
ಕೇವಲ ಒಂದೂವರೆ ತಿಂಗಳಲ್ಲಿ 346 ತಹಸೀಲ್ದಾರ್ ತೀರ್ಪಿನ ಮೇಲ್ಮನವಿ ಕಡತ ವಿಲೇ ಮಾಡಿದ್ದಾರೆ. ಅಷ್ಟೇ ಅಲ್ಲ ಎಲ್ಲ 267 ಸಾಮಾನ್ಯ ಕಡತ ವಿಲೇವಾರಿಗೊಳಿಸಿ ಕಡತಗಳ ಸಂಖ್ಯೆ ಶೂನ್ಯಗೊಳಿಸಿದ್ದಾರೆ.
ಗಂಟೆ, ನಿಮಿಷದಲ್ಲಿ ಕಡತ ವಿಲೇ: ಕಂದಾಯ ಇಲಾಖೆ ಅಧಿಕಾರಿಗಳಿಗೆ ಆಶ್ಚರ್ಯ ತರುವಷ್ಟು ಮಟ್ಟಿಗೆ ಉಪ ವಿಭಾಗಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. 10-15 ವರ್ಷಗಳಿಂದ ನಮ್ಮ ಕಡತ ವಿಲೇವಾರಿ ಮಾಡಿಕೊಡಿ ಎಂದು ಅಲೆದಾಡಿ ಸುಸ್ತಾಗಿದ್ದ ರೈತರಿಗೆ ಕಂದಾಯ ಇಲಾಖೆ ಬಗ್ಗೆ ಹೊಸ ಅಭಿಪ್ರಾಯ ಮೂಡತೊಡಗಿದೆ.
ಸಣ್ಣ ಕಾರಣಗಳಿಗೆ ದಶಕದಿಂದ ಬಾಕಿ ಉಳಿದು ಮೂಲೆ ಸೇರಿದ್ದ ಕೆಲ ಕಡತಗಳಿಗೆ ಗಂಟೆಯೊಳಗೆ ಪರಿಹಾರ ಹುಡುಕಿ ಕಳುಹಿಸಿದ್ದಾರೆ. ಕೆಲ ಕಡತಗಳಿಗೆ ಒಂದೇ ನಿಮಿಷದಲ್ಲಿ ತಮ್ಮ ಟೇಬಲ್ನಿಂದ ಸಹಿ ಹಾಕಿ ಕೊಟ್ಟಿದ್ದಾರೆ.
ಅನಗತ್ಯ ಕಾರಣ ಹುಡುಕಿ ಎಸಿ ಕೋರ್ಟ್ ಅಲೆಯಬೇಕಿದ್ದ ಕೆಲ ಕಡತಗಳನ್ನು ಕೋರ್ಟ್ ನಡೆಸಿದ ತಮ್ಮ ಅಧಿಕಾರ ಬಳಸಿ ನ್ಯಾಯ ಕಲ್ಪಿಸಿ ಬಡವರ ಕಣ್ಣೀರು ಒರೆಸತೊಡಗಿದ್ದಾರೆ.
ಯಾರದೋ ಆಸ್ತಿ ಖಾತೆ ಕರಾಮತ್ತು: ಚಿಕ್ಕಮಗಳೂರು ತಾಲೂಕು ಕರ್ತಿಕೆರೆ ಗ್ರಾಮದಲ್ಲಿ ದೊಡ್ಡೇಗೌಡ ಬಿನ್ ಸಣ್ಣೇಗೌಡ ಅವರ ಆಸ್ತಿಯನ್ನು ಅವರು ಬದುಕಿದ್ದಾಗಲೆ ದೊಡ್ಡೇಗೌಡ ಬಿನ್ ಚಿಕ್ಕಣ ಅವರ ಮಗ ದೊಡ್ಡೇಗೌಡರಿಗೆ ಬೆಲೆ ಬಾಳುವ 20 ಗುಂಟೆ ಜಮೀನು ತಹಸೀಲ್ದಾರ್ ಕಚೇರಿ ಸಿಬ್ಬಂದಿ ಮಾಡಿದ್ದರು.
ಈ ಪ್ರಕರಣ 2013ರಲ್ಲಿ ಎಸಿ ಕಚೇರಿಗೆ ಬಂದರೂ ವಿಲೇವಾರಿ ಆಗಿರಲಿಲ್ಲ. ಮಾಲೀಕ ದೊಡ್ಡೇಗೌಡ ತನ್ನ ಆಸ್ತಿ ಕೈತಪ್ಪಿ ಪಹಣಿಯಲ್ಲಿ ಬೇರೆಯವರ ಹೆಸರು ಬಂದಿರುವ ಬಗ್ಗೆ ಎಸಿ ಅವರಿಗೆ ಸಲ್ಲಿಸಿದ ಅಫೀಲು ಏಳು ವರ್ಷದಿಂದ ಬಾಕಿ ಇತ್ತು.
ಈ ಪ್ರಕರಣವನ್ನು ಯಾವುದೇ ನ್ಯಾಯ ಕಲಾಪ ನಡೆಸದೆ ಎದುರುದಾರನನ್ನು ಕರೆಸಿ ಮೂಲ ಮಾಲೀಕ ದೊಡ್ಡೇಗೌಡರ ಹೆಸರಿಗೆ ಆಸ್ತಿ ಖಾತೆ ಮಾಡಿಸಿರುವ ಎಸಿ ಅವರು ತಮ್ಮ ಕಾರ್ಯವೈಖರಿಯನ್ನು ಕಂದಾಯ ಇಲಾಖೆಗೆ ತೋರಿಸಿಕೊಟ್ಟಿದ್ದಾರೆ.
ಕಂದಾಯ ಕಾಯ್ದೆ -79 ಎ ಆಂಡ್ ಬಿ: ಎಸಿ ಕಚೇರಿಯಲ್ಲಿ ಭೂ ಸುಧಾರಣೆ ಕಾಯ್ದೆ-76ಎ ಆಂಡ್ ಬಿ ಯಡಿ ಎಸಿ ಕಚೇರಿಯಲ್ಲಿ 89 ಕಡತ ಇದ್ದು, ಇವುಗಳಲ್ಲಿ 50 ಕಡತ ವಿಲೇವಾರಿಯಾಗಿವೆ.
ಈ ಕಾಯ್ದೆ ಪ್ರಕಾರ ಎರಡು ಲಕ್ಷ ರೂ.ಗಿಂತ ಹೆಚ್ಚು ಕೃಷಿಯೇತರ ಆದಾಯ ಇರುವವರು ಕೃಷಿ ಭೂಮಿ ಖರೀದಿ ಮಾಡುವಂತಿಲ್ಲ. ಸಣ್ಣ ಪುಟ್ಟ ಕಾರಣಕ್ಕೆ ಇಂಥ ಕಡತಗಳನ್ನು ಬಾಕಿ ಉಳಿಸಲಾಗಿತ್ತು. ಇಂಥ ಪ್ರಕರಣದಲ್ಲಿ ಆಸ್ತಿ ಮಾಲೀಕರ ಜೀವ ಹಿಂಡಿ ಹಣ ವಸೂಲಿ ಮಾಡುವುದು ಹೆಚ್ಚು. ಗಂಭೀರ ಎನ್ನುವ ಇಂಥ ಪ್ರಕರಣಗಳನ್ನು ಅರ್ಹತೆ ಹಾಗೂ ದಾಖಲೆ ಆಧಾರದ ಮೇಲೆ ಎಸಿಯವರು ವಿಲೇ ಮಾಡಿ ಕಂದಾಯ ಇಲಾಖೆಯಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡ ತೊಡಗಿದ್ದಾರೆ.
ಶಿಫಾರಸು ತರಬೇಡಿ ನೇರ ಬನ್ನಿ: ಕಂದಾಯ ಇಲಾಖೆ ಕೆಲಸಗಳಿಗೆ ಯಾರೂ ಯಾರ ಶಿಫಾರಸು ತರುವುದು ಬೇಡ. ನೇರವಾಗಿ ಬಂದು ಭೇಟಿ ಮಾಡಿದರೆ ದಾಖಲೆ ಹಾಗೂ ಅರ್ಹತೆ ಆಧಾರದ ಮೇಲೆ ಕೆಲಸ ಮಾಡಿಕೊಡುತ್ತೇನೆ ಎಂದು ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ಹೇಳಿದ್ದಾರೆ.
ಕಡತ ಬಾಕಿ ಉಳಿಸಿಕೊಂಡು ಸುಮ್ಮನೆ ರೈತರನ್ನು ಅಲೆದಾಡಿಸಿದರೆ ಇಲಾಖೆಗೆ ಒಳ್ಳೆಯದಾಗುವುದಿಲ್ಲ. ಸರ್ಕಾರ ಸಂಬಳ ಕೊಟ್ಟು ನಮ್ಮನ್ನು ಇಲ್ಲಿಟ್ಟಿರುವುದು ಸಾರ್ವಜನಿಕರ ಕೆಲಸ ಮಾಡುವುದಕ್ಕೆ. ಹೀಗಾಗಿ ಧೈರ್ಯವಾಗಿ ಸಾರ್ವಜನಿಕರ ಪರವಾಗಿ ಸರಿಯಾದ ದಾರಿಯಲ್ಲಿ ಕೆಲಸ ಮಾಡುತ್ತೇನೆ. ಕೆಲಸ ಮಾಡದೆ ನೆಪ ಹೇಳುವ ಅಧಿಕಾರಿಗಳು, ನೌಕರರ ಮೇಲೂ ನಾನು ಕ್ರಮಕ್ಕೆ ಶಿಫಾರಸು ಮಾಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ.