ಕಲ್ಪತರು ವಿದ್ಯಾಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ; ರಾಜ್ಯಪಾಲರ ಅಂಕಿತದೊಂದಿಗೆ ಆದೇಶ

KIT Adm Block
Published on

ತಿಪಟೂರು : ಕಲ್ಪತರು ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅವಧಿ ಮುಗಿದರೂ ಚುನಾವಣೆ ನಡೆಸದೆ, ಅವ್ಯವಹಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯಪಾಲರ ಆದೇಶದ ಅನುಸಾರ ಆಡಳಿತಾಧಿಕಾರಿ ನೇಮಕವಾಗಿದೆ.

ಸಂಸ್ಥೆಯಲ್ಲಿ ನಿಗದಿತ ಅವಧಿಗೆ ಚುನಾವಣೆ ನಡೆಸಿಲ್ಲ ಮತ್ತು ಹಣಕಾಸಿನ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮಾಜಿ ಖಜಾಂಚಿ ಹಾಗೂ ಕಾರ್ಯದರ್ಶಿ ಬಿ.ಆರ್.ವಿಶ್ವನಾಥ್, ಸರ್ಕಾರದ ಗಮನ ಸೆಳೆದಿದ್ದರು.  ಈ ಸಂಬಂಧ ಡಿ.8ರಂದು ಸಂಸ್ಥೆ ಅಧ್ಯಕ್ಷ/ಕಾರ್ಯದರ್ಶಿಗೆ ಪತ್ರ ಬರೆದಿದ್ದ ಸಹಕಾರ ಇಲಾಖೆ ಜಂಟಿ ಕಾರ್ಯದರ್ಶಿ, ಸಂಘದ ವಿರುದ್ಧ ಆರೋಪಗಳು ಸಾಬೀತಾಗಿದ್ದು, ಆಡಳಿತಾಧಿಕಾರಿ ಏಕೆ ನೇಮಿಸಬಾರದು ಎಂದು ಪ್ರಶ್ನಿಸಿ, 15 ದಿನಗಳೊಳಗೆ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಉತ್ತರಿಸುವಂತೆ ಸೂಚಿಸಿದ್ದರು.

ಸರ್ಕಾರದ ನೋಟಿಸ್ ಹಾಗೂ ಡಿ.28ರಂದು ವಿಜಯವಾಣಿಯಲ್ಲಿ ಆಡಳಿತಾಧಿಕಾರಿ ನೇಮಕಕ್ಕೆಶಿಫಾರಸು? ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ವರದಿಗೆ ಡಿ.29ರಂದು ಸ್ಪಷ್ಟೀಕರಣ ನೀಡಿದ್ದ ಸಂಸ್ಥೆ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ, ಖಜಾಂಚಿ ಬಿ.ಆರ್.ವಿಶ್ವನಾಥ್ ಅವರೇ ಸಂಸ್ಥೆಯ ಹಣ ದುರ್ಬಳಕೆ ವಾಡಿದ್ದಾರೆ ಎಂಬ ಪ್ರತ್ಯಾರೋಪ ಮಾಡಿ, ಡಿ.29ರಂದು ನಡೆಯಲಿರುವ ಸಂಸ್ಥೆಯ ಜನರಲ್ ಬಾಡಿ ಮೀಟಿಂಗ್‌ನಲ್ಲಿ ಚರ್ಚಿಸಿ, ಜ.30 ರಂದು ಚುನಾವಣೆ ನಡೆಸಲಾಗುವುದು ಎಂದು ಘೋಷಿಸಿಸಿದ್ದರು. ಆದರೆ, ಮಂಗಳವಾರ ಸಂಜೆ ವೇಳೆಗೆ ರಾಜ್ಯಪಾಲರ ಅಂಕಿತದೊಂದಿಗೆ ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸಲಾಗಿದೆ

ವರದಿ ಸಲ್ಲಿಸಲು ಸೂಚನೆ : ತುಮಕೂರಿನ ಸಹಕಾರ ಸಂಗಳ ಸಹಾಯಕ ನಿಬಂಧಕರನ್ನು ಮುಂದಿನ 6 ತಿಂಗಳಿಗೆ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಕೂಡಲೇ ಸಂದ ಪ್ರಭಾರ ವಹಿಸಿಕೊಂಡು, ಸಂದ ನ್ಯೂನತೆಗಳನ್ನು ಸರಿಪಡಿಸಿ, ಆಡಳಿತ ಮಂಡಳಿಗೆ ಚುನಾವಣೆ ನಡೆಸಿ ಅಧಿಕಾರ ಹಸ್ತಾಂತರಿಸಿದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಆಡಳಿತಾಧಿಕಾರಿ ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಅವರಿಗೆ ಅಗತ್ಯ ಸಹಕಾರ ನೀಡಲಾಗುವುದು. ಟಿ.ಎಸ್.ಶಿವಪ್ರಸಾದ್, ಖಜಾಂಚಿ. ಕಲ್ಪತರು ವಿದ್ಯಾಸಂಸ್ಥೆ ಅಧಿಕೃತವಾಗಿ ಆದೇಶದ ಪ್ರತಿ ಸಿಕ್ಕಿಲ್ಲ. ನಮ್ಮಿಂದಂತೂ ಯಾವುದೇ ರೀತಿಯ ಅವ್ಯವಹಾರ ಆಗಿಲ್ಲ. ಹೇಗೂ ಆಡಳಿತಾಧಿಕಾರಿ ನೇಮಿಸಲಾಗಿದೆ. ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಪಿ.ಕೆ.ತಿಪ್ಪೇರುದ್ರಪ್ಪ, ಅಧ್ಯಕ್ಷರು, ಕಲ್ಪತರು ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದ್ದ, ಹೆಸರಾಂತ ಕಲ್ಪತರು ವಿದ್ಯಾಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಆಗಬಾರದಿತ್ತು. ಸಂಸ್ಥೆ ಈ ಕಳಂಕದಿಂದ ಮುಕ್ತವಾಗಲಿ. ಎಚ್.ಎಸ್.ದೇವರಾಜು, ಹಿಂಡಿಸ್ಕೆರೆ ತಿಪಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net