ಬರಿದಾಗುತ್ತಿದೆ ಅಡ್ಕಸ್ಥಳ ಸೀರೆ ಹೊಳೆ

Ksd_Adkasthala
Published on

ಪುರುಷೋತ್ತಮ ಪೆರ್ಲ ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ನೂರಾರು ಮನೆಗಳಿಗೆ ನೀರು ಪೂರೈಸುವ ನಿಟ್ಟಿನಲ್ಲಿ ಅಡ್ಕಸ್ಥಳ ಸೀರೆ ಹೊಳೆಗೆ ಅಡ್ಡ ನಿರ್ಮಿಸಲಾಗಿರುವ ಅಣೆಕಟ್ಟಿಗೆ ಅಳವಡಿಸಿದ ಹಲಗೆ ಸಂದಿಯಿಂದ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದ್ದು, ಈ ಬರಿಯ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗಲಿರುವ ಭೀತಿ ಕಾಡಲಾರಂಭಿಸಿದೆ. ಕಾಟುಕುಕ್ಕೆ, ಪಡ್ರೆ, ಎಣ್ಮಕಜೆ, ಶೇಣಿ ಗ್ರಾಮಗಳ ವ್ಯಾಪ್ತಿಯ ನೂರಾರು ಮನೆಗಳಿಗೆ ಇದೇ ಹೊಳೆಯಿಂದ ಪಂಪಿಂಗ್ ನಡೆಸಿ ನೀರು ಪೂರೈಸಲಾಗುತ್ತಿದೆ. ಅಡ್ಕಸ್ಥಳ ಸೀರೆ ಹೊಳೆಗೆ ಲಕ್ಷಾಂತರ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು, ನೀರು ಸಂಗ್ರಹಿಸುವ ನಿಟ್ಟಿನಲ್ಲಿ ಕಬ್ಬಿಣದ ಹಲಗೆ ಅಳವಡಿಸಲಾಗುತ್ತಿದೆ. ಈ ಬಾರಿ ಕಬ್ಬಿಣದ ಹಲಗೆ ಅಳವಡಿಸುವಲ್ಲಿ ಲೋಪಗಳುಂಟಾಗಿದೆ ಎಂದು ವ್ಯಾಪಕ ದೂರು ಕೇಳಿ ಬರುತ್ತಿದೆ. ಅಡ್ಕಸ್ಥಳ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ಇಲ್ಲಿಂದ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ ಉಕ್ಕಿನಡ್ಕದಲ್ಲಿ ತಲೆಯೆತ್ತುತ್ತಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಬಜಕೂಡ್ಲು ಕಾನ ಪ್ರದೇಶದಲ್ಲಿನ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಸಾಯಿ ಟ್ರಸ್ಟ್ ನಿರ್ಮಿಸಿ ಕೊಟ್ಟಿರುವ ಮನೆಗಳಿಗೂ ಇದೇ ಹೊಳೆಯಿಂದ ನೀರು ಪೂರೈಸಬೇಕಾಗಿರುವುದರಿಂದ ಸಹಜವಾಗಿ ಅಡ್ಕಸ್ಥಳ ಹೊಳೆಯಲ್ಲಿ ನೀರಿನ ಕೊರತೆ ಎದುರಾಗುವ ಭೀತಿ ಕೃಷಿಕರಲ್ಲಿ ಮೂಡಿದೆ. ಈ ಎಲ್ಲ ಕಡೆ ನೀರು ಪೂರೈಸಬೇಕಾದರೆ, ಇಲ್ಲಿ ನಿರಂತರ ಪಂಪಿಂಗ್ ನಡೆಸಬೇಕಾದ ಅನಿವಾರ್ಯತೆಯಿದೆ. ಇದರಿಂದ ಹೊಳೆ ಕೆಲವೇ ದಿವಸಗಳಲ್ಲಿ ಬರಿದಾಗುವ ಸಾಧ್ಯತೆಯಿದೆ. ಹೊಳೆಯಿಂದ ನಿರಂತರ ನೀರು ಮೇಲಕ್ಕೆತ್ತಲು ಉತ್ಸುಕರಾಗುತ್ತಿರುವ ಅಧಿಕಾರಿ ಹಾಗೂ ಆಡಳಿತ ವರ್ಗಕ್ಕೆ ಹೊಳೆಯನ್ನು ಜಲಸಂರಕ್ಷಣೆ ಮೂಲಕ ನಿರಂತರ ನೀರು ಹರಿಯುವಂತೆ ಮಾಡುವ ಯಾವುದೇ ಯೋಜನೆಗಳನ್ನೂ ಅಳವಡಿಸಿಕೊಳ್ಳುತ್ತಿಲ್ಲ. ಅಗಾಧ ನೀರು ಪಂಪಿಂಗ್ ಹೊಳೆ ಮಧ್ಯೆ ನಿರ್ಮಿಸಿರುವ ಬೃಹತ್ ಬಾವಿಯಿಂದ 130 ಎಚ್‌ಪಿ ಸಾಮರ್ಥ್ಯದ ಎರಡು ಮೋಟಾರುಗಳ ಮೂಲಕ ಇಲ್ಲಿಂದ ನಿರಂತರ ನೀರು ಪಂಪ್‌ಮಾಡಿ ಗೋಳಿತ್ತಡ್ಕದ ಶುದ್ಧೀಕರಣ ಘಟಕಕ್ಕೆ ರವಾನಿಸಲಾಗುತ್ತದೆ. ಅಲ್ಲಿಂದ ಪಂಚಾಯಿತಿ ವ್ಯಾಪ್ತಿಯ ಹಾಗೂ ನೆರೆಯ ಬದಿಯಡ್ಕ ಪಂಚಾಯಿತಿ ವ್ಯಾಪ್ತಿಗೂ ನೀರು ರವಾನೆಯಾಗುತ್ತಿದೆ. ಅಡ್ಕಸ್ಥಳ ಹೊಳೆಯನ್ನು ಆಶ್ರಯಿಸಿ ಪೈಪ್‌ನ ಮೂಲಕ ನೀರು ವಿತರಣೆಯ ಜಾಲವೂ ಮತ್ತಷ್ಟು ವಿಸ್ತಾರಗೊಂಡಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆಯ ಭೀತಿ ಕಾಡಲಾರಂಭಿಸಿದೆ. ಸಂಪೂರ್ಣ ನೀರು ಸಂಗ್ರಹಗೊಂಡಲ್ಲಿ ಮಾತ್ರ ಮೇ ತಿಂಗಳವರೆಗೆ ನೀರು ಸರಬರಾಜು ಸಾಧ್ಯವಾಗಲಿದೆ. ತುಂಬಿಕೊಂಡಿದೆ ಅಪಾರ ಹೂಳು ಅಡ್ಕಸ್ಥಳ ಹೊಳೆಯಲ್ಲಿ ಹೂಳು ತುಂಬಿಕೊಂಡಿರುವುದೂ, ನೀರು ದಾಸ್ತಾನಿಗೆ ತೊಡಕುಂಟಾಗುತ್ತಿದೆ. ಹೊಳೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಆಸುಪಾಸಿನ ತೋಟಗಳಿಗೆ ನೆರೆ ಹಾವಳಿಯೂ ಹೆಚ್ಚಾಗಿದೆ. ಇನ್ನು ಅಡ್ಕಸ್ಥಳ ಹೊಳೆ ನೀರನ್ನು ಆಶ್ರಯಿಸಿ ನೀರಿನ ವಿತರಣೆಯನ್ನೂ ವಿಸ್ತರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಡ್ಕಸ್ಥಳ ಪ್ರದೇಶದ ಜನತೆಗೆ ನೀರಿನ ಲಭ್ಯತೆಯ ಬಗ್ಗೆಯೂ ಆತಂಕ ಮೂಡಲಾರಂಭಿಸಿದೆ.

ಈ ಬಾರಿ ಹೆಚ್ಚಿನ ಮಳೆಯಾಗಿರುವುದರಿಂದ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಅಡ್ಕಸ್ಥಳ ಹೊಳೆಗೆ ಅಡ್ಡಕಟ್ಟಲಾಗಿರುವ ಅಣೆಕಟ್ಟಿಗೆ ಅಳವಡಿಸಿರುವ ಹಲಗೆ ಸಂದಿಯಿಂದ ನೀರು ಸೋರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. - ವಿಜಯನ್, ಸಹಾಯಕ ಅಭಿಯಂತ, ಜಲಪ್ರಾಧಿಕಾರ, ಬೋವಿಕ್ಕಾನ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net