ಪಾಲಿಕೆ ಸಾಮಾನ್ಯ ಸಭೆ ಮುಂದೂಡಿಕೆ

h30-hdmc 2
Published on

ಹುಬ್ಬಳ್ಳಿ: ಹೆಚ್ಚುವರಿ ವಿಷಯ ಪಟ್ಟಿ ಮಂಡನೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ಮಧ್ಯೆ ಮಾತಿನ ಜಟಾಪಟಿ ನಡೆದು, ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯು ಮುಂದೂಡಲ್ಪಟ್ಟಿತು.

ಸಭೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕಿ ಸುವರ್ಣಾ ಕಲಕುಂಟ್ಲಾ ಅವರು, ಹೆಚ್ಚುವರಿ ಪಟ್ಟಿಯನ್ನು ಸಭೆಗೆ ಮಂಡಿಸುವ ಮುನ್ನ ಸದಸ್ಯರಿಗೆ 24ಗಂಟೆ ಮೊದಲು ತಿಳಿಸಬೇಕು. ಗಮನಕ್ಕಿರದೇ ಏಕಾಏಕಿ ಸಭೆಗೆ ತಂದಿರುವುದು ಸರಿಯಲ್ಲ. ಈ ಕುರಿತು ವಿವರಣೆ ನೀಡುವಂತೆ ಪರಿಷತ್ ಕಾರ್ಯದರ್ಶಿ ಗುರುಶಾಂತಪ್ಪ ಡಂಬಳ ಹಾಗೂ ಕಾನೂನು ಅಧಿಕಾರಿ ಜಿ.ಸಿ. ಹಿರೇಮಠ ಅವರಿಗೆ ಪಟ್ಟು ಹಿಡಿದರು. ಕಾನೂನು ಪುಸ್ತಕ ಓದಿದ ಅಧಿಕಾರಿಗಳಿಂದಲೂ ಸಮರ್ಪಕ ಉತ್ತರ ಸಿಗಲಿಲ್ಲ. ಇದರಿಂದ ಕೆರಳಿದ ಪ್ರತಿಪಕ್ಷದ ಸದಸ್ಯರಾದ ಸಂದಿಲ್​ಕುಮಾರ, ದೋರಜ್ ಮನ್ನೆಕುಂಟ್ಲಾ ಇತರರು, ಕಾನೂನು ಬಗ್ಗೆ ತಿಳಿವಳಿಕೆ ಇಲ್ಲದಿದ್ದರೆ ಹೇಗೆ ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆಗ ಮಧ್ಯೆ ಪ್ರವೇಶಿಸಿದ ಆಡಳಿತ ಪಕ್ಷದ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಶಿವು ಹಿರೇಮಠ, ವೀರಣ್ಣ ಸವಡಿ, ರಾಜಣ್ಣ ಕೊರವಿ ಇತರರು, ಹೆಚ್ಚುವರಿ ವಿಷಯ ಪಟ್ಟಿ ಮಂಡಿಸುವ ಸ್ವಾತಂತ್ರ್ಯ ಮೇಯರ್​ಗೆ ಇದೆ. ಪಟ್ಟಿಗೆ ವಿರೋಧಿಸುವ ಮೂಲಕ ಸ್ಥಾನಕ್ಕೆ ಅವಮಾನ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸಿದರು. ಇದು ಕೆಲಹೊತ್ತು ಗಲಾಟೆಯ ಗೂಡಾಗಿ ಪರಿವರ್ತನೆಗೊಂಡಿತು. ಆಡಳಿತ ಪಕ್ಷದವರು ಮೇಯರ್ ಟೇಬಲ್ ಮುಂದೆ ಧಾವಿಸಿದರು. ಇದೆಲ್ಲವನ್ನೂ ಆಲಿಸಿದ ಮೇಯರ್ ವೀಣಾ ಬರದ್ವಾಡ್, ಸಭೆಯನ್ನು ಮುಂದೂಡಿದರು.

ಮತ್ತೊಂದು ಸಭೆ: ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೇಯರ್ ಕಚೇರಿಯಲ್ಲಿ ಆಡಳಿತ ಪಕ್ಷದ ಸದಸ್ಯರ ಸಭೆ ನಡೆಯಿತು. ಸಭಾಂಗಣದಲ್ಲಿ ಕುಳಿತಿದ್ದ ಪ್ರತಿಪಕ್ಷದವರು, ಹೆಚ್ಚುವರಿ ಪಟ್ಟಿ ಕೈಬಿಟ್ಟು ತಾವು ಕೊಟ್ಟಿರುವ ಪಟ್ಟಿಗಳ ವಿಷಯಗಳನ್ನು ರ್ಚಚಿಸಬೇಕೆಂದು ಪರಿಷತ್ ಕಾರ್ಯದರ್ಶಿಗೆ ಸೂಚಿಸಿದರು. ಮೇಯರ್ ಸಾಮಾನ್ಯ ಸಭೆಗೆ ಆಗಮಿಸಿದ ನಂತರ ಚಾಲನೆ ನೀಡಲಾಗುವುದು ಎಂದು ಕಾರ್ಯದರ್ಶಿ ಹೇಳಿದರು. ಮೇಯರ್ ಇನ್ನೂ ಸಭಾಂಗಣಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಪ್ರತಿಪಕ್ಷದ ಸದಸ್ಯರು, ಮೇಯರ್ ಕಚೇರಿ ಮುಂದೆ ತೆರಳಿ ಪ್ರತಿಭಟನೆ ನಡೆಸಿದರು. ನಂತರ ಮತ್ತೆ ಸಾಮಾನ್ಯ ಸಭೆ ಆರಂಭವಾಯಿತು. ಹೆಚ್ಚುವರಿ ವಿಷಯದ ಪಟ್ಟಿ ಕೈಬಿಟ್ಟು, ಹು-ಧಾ ಅವಳಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ಮಾಡೋಣ ಎಂದು ಪ್ರತಿಪಕ್ಷದವರು ಹೇಳಿದರು. ಪ್ರಚಲಿತ ಪೌರಕಾರ್ವಿುಕರು ತಮ್ಮ ಸಮಸ್ಯೆ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಷಯ ರ್ಚಚಿಸೋಣ ಎಂದು ಆಡಳಿತ ಪಕ್ಷದವರು ಹೇಳಿದರು. ಆಗ ಕೆರಳಿದ ಪ್ರತಿಪಕ್ಷದವರು, ಶೂನ್ಯ ವೇಳೆಯಲ್ಲಿ ಈ ವಿಷಯ ರ್ಚಚಿಸೋಣ ಎಂದರು. ಇದರಿಂದ ಕೆಲಹೊತ್ತು ಮಾತಿನ ಮೇಲಾಟಗಳು ತೀವ್ರಗೊಂಡವು. ಮೇಯರ್ ವೀಣಾ ಬರದ್ವಾಡ ಅವರು ಅನಿರ್ದಿಷ್ಟಾವಧಿ ಸಭೆ ಮುಂದೂಡಿ ರೂಲಿಂಗ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net