ಮಾ.೧೧ಕ್ಕೆ ವಿಚಾರಣೆ ಮುಂದೂಡಿಕೆ

cnc
Published on

ಮಡಿಕೇರಿ: ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ಟ್ಯಾಗ್ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಬೇಡಿಕೆಗೆ ಪೂರಕವಾಗಿ ಆಯೋಗವನ್ನು ರಚಿಸಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ, ಹಾರ್ವರ್ಡ್ ವಿದ್ವಾಂಸ, ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ನಡೆಯಿತು.

ಕರ್ನಾಟಕ ರಾಜ್ಯ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿತು. ಡಾ.ಸುಬ್ರಮಣಿಯನ್ ಸ್ವಾಮಿ ಹಾಗೂ ಅವರ ಕಾನೂನು ಸಹಾಯಕರಾದ ಹೈಕೋರ್ಟ್ ವಕೀಲ ಕಿರಣ್ ನಾರಾಯಣ್ ವಿಚಾರಣೆ ಸಂದರ್ಭ ಭಾಗಿಯಾಗಿದ್ದರು. ಸಿಎನ್‌ಸಿ ಬೇಡಿಕೆಗೆ ಆಕ್ಷೇಪ ಸಲ್ಲಿಸಿದ ಪ್ರತಿವಾದಿಗಳ ಅಹವಾಲನ್ನು ಕೂಡ ಆಲಿಸಿದ ಮುಖ್ಯ ನ್ಯಾಯಾಧೀಶರು ಇತರ ಮಧ್ಯಸ್ಥಿಕೆ ಅರ್ಜಿಗಳನ್ನು ಅನುಮತಿಸಿದರು ಮತ್ತು ಇನ್ನು ಮುಂದೆ ಸೇರಿಸಲಾಗುವುದಿಲ್ಲ ಎಂದು ಹೇಳಿದರು.

೩ನೇ ಮಾರ್ಚ್ ೨೦೨೫ ರೊಳಗೆ ತಮ್ಮ ಮನವಿಯನ್ನು ಪೂರ್ಣಗೊಳಿಸಲು ಕಕ್ಷಿದಾರರಿಗೆ ತಿಳಿಸಲಾಯಿತು. ವಿಚಾರಣೆಯ ಮುಂದಿನ ದಿನಾಂಕವನ್ನು ೧೧ನೇ ಮಾರ್ಚ್ ೨೦೨೫ ಕ್ಕೆ ನಿಗದಿಪಡಿಸಲಾಯಿತು.

ವಿಚಾರಣೆ ನಂತರ ಮಾತನಾಡಿದ ಎನ್.ಯು.ನಾಚಪ್ಪ ಅವರು, ಕಳೆದ ೩೫ ವರ್ಷಗಳಿಂದ ಸಿಎನ್‌ಸಿ ಸಂಘಟನೆ ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟವನ್ನು ನಡೆಸಿಕೊಂಡು ಬರುತ್ತಿದೆ. ಕೊಡವರಿಗೆ ಕೊಡವ ಲ್ಯಾಂಡ್ ಬಿಟ್ಟರೆ ಬೇರೆ ಪ್ರದೇಶವಿಲ್ಲ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕಾನೂನು ಹೋರಾಟದಿಂದ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ನ್ಯಾಯ ಸಿಗಲಿದ್ದು, ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ಟ್ಯಾಗ್ ಪಡೆಯುವ ವಿಶ್ವಾಸವಿದೆ. ಕೊಡವ ಲ್ಯಾಂಡ್ ಬೇಡಿಕೆ ತಾರ್ಕಿಕ ಅಂತ್ಯ ಕಾಣುವಲ್ಲಿಯವರೆಗೆ ಹೋರಾಟ ಅಚಲ ಮತ್ತು ಮುಂದುವರಿಯಲಿದೆ ಎಂದರು.

ವಿರಾಟ್ ಹಿಂದೂಸ್ತಾನ್ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ವಿಎಚ್‌ಎಸ್ ರಾಜ್ಯಾಧ್ಯಕ್ಷ ನಿಖುಂಜ್ ಶಾ, ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಕಾಟುಮಣಿಯಂಡ ಉಮೇಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್, ಚಂಬಂಡ ಜನತ್, ಪಾರ್ವಂಗಡ ನವೀನ್, ವಿಹೆಚ್‌ಎಸ್ ಸದಸ್ಯರಾದ ರವಿಶಂಕರ್ ಹಾಗೂ ಶಿವು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net