

ಶ್ರೀರಂಗಪಟ್ಟಣ: ಮುಸ್ಲಿಂ ಮಹಿಳೆಯರ ಬಗ್ಗೆ ಲಘು ಹೇಳಿಕೆ ನೀಡಿರುವ ಆರೋಪಕ್ಕೆ ಗುರಿಯಾಗಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದಾಖಲಾಗಿರುವ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಪಟ್ಟಣದ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪ್ರಕರಣವನ್ನು ಜ.17ಕ್ಕೆ ಮುಂದೂಡಿತು.
ಪಟ್ಟಣದಲ್ಲಿ ಕಳೆದ ಡಿ.24ರಂದು ನಡೆದಿದ್ದ ಹನುಮ ಮಾಲಾಧಾರಿಗಳ ಸಂಕಿರ್ತನಾ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾಡಿದ್ದ ವಿವಾದಿತ ಭಾಷಣದ ವಿರುದ್ಧ ಪಿರಿಯಾಪಟ್ಟಣ ಮೂಲದ ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಝೀರ್ ಚಿಕ್ಕನೇರಳೆ ಪ್ರಕರಣ ದಾಖಲಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಫಿರ್ಯಾದಿದಾರರ ಪರ ಹೈಕೋರ್ಟ್‌ನ ಹಿರಿಯ ವಕೀಲ ಎಸ್.ಬಾಲನ್ ವಾದ ಮಂಡಿಸಿದರು.
ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಘೋರ ಅಪರಾಧ ಮತ್ತು ದೇಶದ ಐಕ್ಯತೆಗೂ ಧಕ್ಕೆ ತರುತ್ತದೆ. ಅವರ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿದ್ದು ಇದೊಂದು ಸೈಬರ್ ಅಪರಾಧ. ಈ ಬಗ್ಗೆ ಆರೋಪಿಯ ಧ್ವನಿ ಪರೀಕ್ಷೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ಬಾಲನ್ ತಿಳಿಸಿದರು. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳನ್ನು ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಜಾಮೀನು ಮಂಜೂರು ಮಾಡದಂತೆ ಕೋರಲಾಗಿದೆ ಎಂದರು.
ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪರ ವಾದ ಮಂಡಿಸಿದ್ದ ವಕೀಲ ಡಿ.ಚಂದೇಗೌಡ ಅವರು ಪ್ರಭಾಕರ್ ಭಟ್ ಅವರ ವಿರುದ್ಧ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಪಡಿಸುವಂತಹ ಗಂಭೀರ ಪ್ರಕರಣವೇನು ದಾಖಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ವಿಡಿಯೋಗಳಿಗೆ ಸಂಬಂಧಿಸಿದ ದೂರಿನ ಕುರಿತು ತನಿಖೆಗೆ ಒಳಪಡಬೇಕಿದ್ದು, ಆರೋಪಿತರು ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಅವರು ಷರತ್ತು ವಿಧಿಸಿದ್ದರೂ ಒಪ್ಪಲು ಅವರಿಗೆ ಜಾಮೀನು ನೀಡಬೇಕು ಎಂದು ವಾದ ಮಂಡಿಸಿದ್ದರು.