

ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಕಳಕಪ್ಪ ನಾಗಪ್ಪ ಬಂಡಿ ಆದಿಯೋಗಿಯ ಮಣ್ಣಿನ ಮೂರ್ತಿ ತಯಾರಿಸಿ ಗಮನ ಸೆಳೆದಿದ್ದಾನೆ.
ವಿದ್ಯಾರ್ಥಿಗಳಿಗಾಗಿ ಆನ್‌ಲೈನ್‌ನಲ್ಲಿ ನಡೆಯುವ ಸ್ಪರ್ಧೆಗಾಗಿ ಮಣ್ಣಿನ ಮೂರ್ತಿಯನ್ನು ಕಳಕಪ್ಪ ತಯಾರಿಸಿದ್ದಾನೆ. ಚಿತ್ರಕಲಾ ಶಿಕ್ಷಕ ನೆಹರೂ ಮನೋಳಿ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಯ ಕಲಾ ಪ್ರತಿಭೆಗೆ ಗ್ರಾಮಸ್ಥರು, ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
‘ವಿದ್ಯಾರ್ಥಿಯ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿದ್ದೇನೆ. ವಿದ್ಯಾರ್ಥಿಗಳು ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಕಳಕಪ್ಪನಲ್ಲಿ ಆಸಕ್ತಿ ಇತ್ತು. ಹೀಗಾಗಿ ಆತ ಮಣ್ಣಿನ ಮೂರ್ತಿಯನ್ನು ಅತ್ಯಂತ ಸುಂದರವಾಗಿ ನಿರ್ಮಿಸಿದ್ದಾನೆ’ ಎನ್ನುತ್ತಾರೆ ಚಿತ್ರಕಲಾ ಶಿಕ್ಷಕ ನೆಹರೂ ಮನೋಳಿ.
ಆನ್‌ಲೈನ್ ಸ್ಪರ್ಧೆಗೆಂದು ಮೂರ್ತಿಯನ್ನು ತಯಾರಿಸಿದ್ದೇನೆ. ಗುಳ್ಳವ್ವನ ಕೆರೆಯಿಂದ ಮಣ್ಣು ತಂದು ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನದಿಂದ ಆದಿಯೋಗಿ ಮೂರ್ತಿಯನ್ನು ಎರಡು ಗಂಟೆಯೊಳಗೆ ತಯಾರಿಸಿದ್ದೇನೆ. ಭವಿಷ್ಯದಲ್ಲಿ ಉತ್ತಮ ಕಲಾಕಾರನಾಗುವ ಕನಸನ್ನು ಹೊಂದಿದ್ದೇನೆ. ಕಳಕಪ್ಪ ಬಂಡಿ, ವಿದ್ಯಾರ್ಥಿ