ಆದಿವಾಸಿಗಳಿಗೆ ಒಳ ಮೀಸಲು ಜಾರಿ ಅಗತ್ಯ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಆದಿವಾಸಿ ಹೋರಾಟಗಾರ ಸೋಮಣ್ಣ ಅಭಿಪ್ರಾಯ

5
Published on

ಮೈಸೂರು: ಆದಿವಾಸಿಗಳಿಗೆ ಉದ್ಯೋಗಾವಕಾಶದೊಂದಿಗೆ ಉನ್ನತ ಶಿಕ್ಷಣ ಪಡೆಯಲು ಒಳ ಮೀಸಲಾತಿ ಜಾರಿ ಅಗತ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಆದಿವಾಸಿ ಹೋರಾಟಗಾರ ಸೋಮಣ್ಣ ಅಭಿಪ್ರಾಯಪಟ್ಟರು.
ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದಿಂದ ನಗರದ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 15ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನೇಕ ತಾರತಮ್ಯದಿಂದ ಬಡುಕಟ್ಟು ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಅನೇಕ ಪಂಗಡಗಳನ್ನು ಆದಿವಾಸಿಗಳ ಗುಂಪಿಗೆ ಸೇರಿಸಲಾಗುತ್ತಿದೆ. ಇದರಿಂದ ನಿಜವಾದ ಆದಿವಾಸಿಗಳಿಗೆ ಉದ್ಯೋಗ, ಉನ್ನತ ಶಿಕ್ಷಣ ದೊರೆಯುತ್ತಿಲ್ಲ. ಹಾಗಾಗಿ ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
ಇಂದಿಗೂ ಆದಿವಾಸಿಗಳಿಗೆ ಹಲವು ಹಕ್ಕುಗಳು ದೊರೆತಿಲ್ಲ. ಅರಣ್ಯ ಕಾಯ್ದೆ ಸಮರ್ಪಕವಾಗಿ ಜಾರಿಯಾಗಿಲ್ಲ. ಆದಿವಾಸಿ ಮಕ್ಕಳಿಗೆ ಶಿಕ್ಷಣ ಇಲ್ಲ. ಯುವ ಸಮೂಹಕ್ಕೆ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಒಳ ಮೀಸಲು ಜಾರಿಯಾದರೆ ಆದಿವಾಸಿಗಳ ಜನರು ಉನ್ನತ ಶಿಕ್ಷಣ ಪಡೆಯಲು, ಡಾಕ್ಟರೇಟ್ ಪದವಿ ಪಡೆದು ಉನ್ನತ ಹುದ್ದೆ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಬುಡಕಟ್ಟು ಸಮುದಾಯದ ಯುವ ಜನತೆ ಪ್ರಜ್ಞಾವಂತರಾಗಿ ಶಿಕ್ಷಣ ಪಡೆದು ಸಮಾಜದ ಮುನ್ನಲೆಗೆ ಬರಬೇಕು. ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ಬುಡಕಟ್ಟು ಸಮುದಾಯದವರಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದೆ ಎಂದು ಹೇಳಿದರು.
ಈ ಸಮುದಾಯ ಸಾಂಸ್ಕೃತಿಕವಾಗಿ ಹೆಚ್ಚು ಸಂಪದ್ಭರಿತವಾಗಿದೆ. ಆದರೆ ಶಿಕ್ಷಣ ಹಾಗೂ ಸಮಾಜದಲ್ಲಿ ತೀರಾ ಹಿಂದುಳಿದಿದ್ದಾರೆ. ಹೀಗಾಗಿ ಸಮುದಾಯದ ಯುವ ಜನರು ಹೆಚ್ಚು ಶಿಕ್ಷಣ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ನಿಮ್ಮ ಸಂಸ್ಕೃತಿ ಉಳಿಸಿಕೊಂಡು ಶಿಕ್ಷಿತರಾಗಿ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ್, ಕ್ರೀಡಾ ಮತ್ತು ಯವ ಸಬಲೀಕರಣ ಇಲಾಖೆಯ ಭಾಸ್ಕರ್ ನಾಯಕ್, ಮುಖಂಡರಾದ ಶ್ರೀಕಾಂತ್, ಅಭಿಷೇಕ್ ಚವರೆ, ಎಂ.ಪಿ.ವರ್ಷ, ಚಿನ್ನಗಿರಿಗೌಡ ಮತ್ತಿತರರಿದ್ದರು. ಬಳಿಕ ಆದಿವಾಸಿಗಳಿಗೆ ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net