ಭಾಷಾ ವಿಷಯದಲ್ಲೂ ಆದಿವಾಸಿಗಳು ಅತಂತ್ರ

HUN-DEC-13-1(DEED PROGRAMME INAGURATION)
Published on

ಹುಣಸೂರು: ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ವಿವಿಧ ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಮತ್ತು ಆದಿವಾಸಿ ಸಮುದಾಯ ಕುರಿತ ವಿಚಾರ ಸಂಕಿರಣ ಆದಿವಾಸಿ ಮುಖಂಡರು ಮತ್ತು ಆದಿವಾಸಿ ಅಭಿವೃದ್ಧಿಯ ಕನಸನ್ನು ಹೊತ್ತ ಮನಸುಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಪಟ್ಟಣದ ಡೀಡ್ ಸಂಸ್ಥೆ ಆವರಣದಲ್ಲಿ ಶುಕ್ರವಾರ ತಾಲೂಕಿನ ಶರಣ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ, ಡೀಡ್ ಸಂಸ್ಥೆ, ದಲಿತ ಚಳವಳಿ ನವನಿರ್ಮಾಣ ವೇದಿಕೆ, ಬುಡಕಟ್ಟು ಕೃಷಿಕರ ಸಂಘ ಮತ್ತು ಗಿರಿಜನ ಸುರಕ್ಷಾ ವೇದಿಕೆ ಸಹಯೋಗದಲ್ಲಿ ಆಯೋಜಿದ್ದ ವಿಚಾರ ಸಂಕಿರಣದಲ್ಲಿ ಕನ್ನಡ ಭಾಷೆಯ ಪ್ರಸ್ತುತ ಪರಿಸ್ಥಿತಿ, ಉಳಿವು, ಅಳಿವು, ಎದುರಿಸುತ್ತಿರುವ ಸಮಸ್ಯೆಗಳು, ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳಿಗೆ ಕನ್ನಡದ ನಂಟು, ಅವರ ಮಾತೃಭಾಷೆಯ ಸ್ಥಿತಿಗತಿಗಳ ಕುರಿತು ಅಭಿಪ್ರಾಯಗಳು ಪ್ರಕಟವಾಯಿತು.

ಕಾಡಿನಿಂದ ಹೊರದೂಡಲ್ಪಟ್ಟ ಆದಿವಾಸಿಗಳ ಬದುಕು ಅತಂತ್ರ ಸ್ಥಿತಿಯಲ್ಲೇ ಮುಂದುವರಿದಿದ್ದು, ಭಾಷೆಯ ವಿಷಯದಲ್ಲೂ ಎಡಬಿಡಂಗಿ ಪರಿಸ್ಥಿತಿ ಮುಂದುವರಿದಿದೆ ಎನ್ನುವುದು ಆದಿವಾಸಿಗಳ ಮಾತಿನಿಂದ ಸ್ಪಷ್ಟವಾಯಿತು.

ಶರಣ ಸಾಹಿತ್ಯ ಮತ್ತು ಕನ್ನಡ ಭಾಷೆ ಕುರಿತು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಮಾತನಾಡಿ, ಅಲ್ಲಮಪ್ರಭುವಿನ ಕಾಲದಿಂದ ಆರಂಭವಾಗಿ ಇಂದಿನ ದಿನಮಾನಸದವರೆಗಿನ ಸಂಬಂಧಗಳನ್ನು ವಿವರಿಸಿದರು.

ದಲಿತ ಚಳವಳಿ ಮತ್ತು ಬಂಡಾಯ ಸಾಹಿತ್ಯ ಕುರಿತು ಹಿರಿಯ ದಲಿತ ಹೋರಾಟಗಾರ ಹರಿಹರಾನಂದಸ್ವಾಮಿ ಮಾತನಾಡಿ, ಭಾಷೆಯೊಂದು ಅನ್ನಕೊಡುವ ಭಾಷೆಯಾದಲ್ಲಿ ಮಾತ್ರ ಉಳಿವು ಸಾಧ್ಯ. ಈ ನೆಲದ ಮೂಲನಿವಾಸಿಗಳ ಸಂಸ್ಕೃತಿಯ ಪ್ರತೀಕವಾಗಿ ಇಂದು ಕೇವಲ ಪಳೆಯುಳಿಕೆಗಳ ಪರಿಸ್ಥಿತಿಯಲ್ಲಿ ಆದಿವಾಸಿ ಸಮುದಾಯವಿದೆ ಎಂದು ವಿಷಾದಿಸಿದರು.

ಕರವೇ ಮತ್ತು ಕನ್ನಡ ಪರ ಹೋರಾಟ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಪ್ರಸ್ತಾಪಿಸಿ, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯದತ್ತ ವೇದಿಕೆ ಮುಂದಡಿಯಿಟ್ಟಿದೆ ಎಂದರು.

ಆದಿವಾಸಿಗಳ ಬದುಕು ಬವಣೆ, ಭಾಷೆಗಳ ಪರಿಸ್ಥಿತಿ, ತಾಲೂಕಿನ ಜ್ವಲಂತ ಸಮಸ್ಯೆಗಳು, ಆದಿವಾಸಿಗಳ ಬೇಡಿಕೆಗಳ ಕುರಿತು ಅಧ್ಯಕ್ಷತೆ ವಹಿಸಿದ್ದ ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿದರು.

ಆದಿವಾಸಿ ಮುಖಂಡರಾದ ಜಯಪ್ಪ, ಹರ್ಷ, ಗಿರಿಜನ ಸುರಕ್ಷಾ ವೇದಿಕೆ ಡಾ.ಗಣೇಶ್ ಸರ್ಕಾರಗಳ ಬೇಜವಾಬ್ದಾರಿ ವರ್ತನೆಯಿಂದ ಆದಿವಾಸಿಗಳ ಭಾಷೆಯ ಮೇಲೆ ಕವಿದಿರುವ ಮೋಡ, ಕನ್ನಡ ಭಾಷೆಯನ್ನೂ ಕಲಿಯಲಾಗದ ಪರಿಸ್ಥಿತಿ ಕುರಿತು ಮಾತನಾಡಿದರು. ರಾಜ್ಯ ಕಾನೂನು ಸೇವಾ ಆಯೋಗದ ಮಾಜಿ ಸದಸ್ಯ ವಿಠಲ್ ನಾಣಾಚ್ಚಿ ಆದಿವಾಸಿಗಳ ಶ್ರದ್ಧಾಕೇಂದ್ರ ಅಂಬಾಲ(ದೇಗುಲ)ದ ಕುರಿತು ಮಾಹಿತಿ ಒದಗಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net