ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

19adarshkdga1
Published on

ಮಡಿಕೇರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆದಿವಾಸಿ ಭಾರತ್ ಮಹಾಸಭಾದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ವಿವಿಧ ಬೇಡಿಕೆಗಳನ್ನು ಮುಂದಿಟ್ಟ್ಡು ನೂರಾರೂ ಸಂಖ್ಯೆಯ ಪ್ರತಿಭಟನಾಕಾರರು ಘೋಷಣೆ ಕೂಗಿ ಹಕ್ಕೋತ್ತಾಯ ಮಂಡಿಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಬೇಡಿಕೆಗೆ ಸ್ಪಂದನ ನೀಡದಿದ್ದಲ್ಲಿ ಆದಿವಾಸಿಗಳು ಒಂದಾಗಿ ಅಹೋರಾತ್ರಿ ಪ್ರತಿಭಟಿಸಲಾಗುತ್ತದೆ ಎಂದು ಸಂಘಟನೆ ಎಚ್ಚರಿಸಿದರು.

ಸಂಘಟನೆಯ ಕೇಂದ್ರ ಸಮಿತಿಯ ಸದಸ್ಯ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದಲ್ಲಿ ಕಸವಿಲೇವಾರಿ ಘಟಕ ಮಾಡುವುದನ್ನು ರದ್ದುಗೊಳಿಸಬೇಕು. ಅಲ್ಲಿನ ಆದಿವಾಸಿ ನಿವಾಸಿಗಳಿಗೆ ತಲಾ ೩ ಏಕರೆ ಭೂಮಿ ಹಾಗೂ ಹಕ್ಕುಪತ್ರ ಒದಗಿಸಬೇಕು. ಗೋಣಿಗದ್ದೆ ಕೊಡಂಗೆ ಹಾಡಿ ಜನರಿಗೆ ಅರಣ್ಯದ ಅಂಚಿಗೆ ತಲಾ ೩ ಏಕರೆ ಭೂಮಿ, ಪುನರ್ವಸತಿ ಕಲ್ಪಿಸಬೇಕು.

ಲೈನ್‌ಮನೆ ವಾಸಿಗಳಿಗೆ ಕೃಷಿ ಭೂಮಿ, ೯೪ ಸಿ, ಸಿಸಿ ಹಾಗೂ ೫೭ರಡಿಯಲ್ಲಿ ಆದಿವಾಸಿಗಳಿಗೆ ಹಕ್ಕು ಪತ್ರ, ಸಾಗುವಳಿ ಮಾಡಿರುವ ಕೃಷಿಭೂಮಿಗೆ ಹಕ್ಕುಪತ್ರ ನೀಡಬೇಕು. ಹುಲಿ ದಾಳಿಯಿಂದ ಸಾವನ್ನಪ್ಪಿರುವ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ತ್ವರಿತವಾಗಿ ನೀಡಬೇಕು. ಅರಣ್ಯ ಹಕ್ಕು ಕಾಯ್ದೆ ಸಮರ್ಥವಾಗಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಚಿಣ್ಣಪ್ಪ, ಪ್ರಮುಖರಾದ ಅನಿತಾ, ಜಯಣ್ಣ, ಮುತ್ತಣ್ಣ, ರಘು, ಮಧು ಸೇರಿದಂತೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net