

ಸುಬ್ರಹ್ಮಣ್ಯ: ಇಸ್ರೋದಿಂದ ಉಡಾವಣೆಗೊಳ್ಳಲಿರುವ ಆದಿತ್ಯ -ಎಲ್1 ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಳ್ಳಲಿ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಸ್ರೋ ಹೆಚ್ಚುವರಿ ಕಾರ್ಯದರ್ಶಿ ಮತ್ತು ನಿರ್ದೇಶಕಿ ಸಂಧ್ಯಾ ವಿ.ಶರ್ಮಾ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದರು.
ಗುರುವಾರ ರಾತ್ರಿ ಕುಕ್ಕೆಗೆ ಆಗಮಿಸಿದ ಅವರು ಶುಕ್ರವಾರ ಮಧ್ಯಾಹ್ನದ ಮಹಾಪೂಜೆಗೆ ಸಂಕಲ್ಪ ನೆರವೇರಿಸಿದರು. ಬಳಿಕ ಮಹಾಪೂಜೆ ವೀಕ್ಷಿಸಿ, ಮಹಾಪೂಜೆ ಸೇವೆ ಸಮರ್ಪಿಸಿದರು. ನಂತರ ಇಸ್ರೋದಿಂದ ಸೂರ್ಯ ಗ್ರಹದ ಅಧ್ಯಯನಕ್ಕಾಗಿ ಉಡಾವಣೆಗೊಳ್ಳಲಿರುವ ಆದಿತ್ಯ -ಎಲ್1 ಉಪಗ್ರಹ ಯಾವುದೇ ತೊಂದರೆಗಳಿಲ್ಲದೆ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಅರ್ಚಕ ಸತ್ಯನಾರಾಯಣ ನೂರಿತ್ತಾಯರು ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು. ನಂತರ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.
ದೇವಳದ ಆಡಳಿತ ಕಚೇರಿಗೆ ಭೇಟಿ ನೀಡಿದ ಸಂಧ್ಯಾ ವಿ.ಶರ್ಮ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಸನ್ಮಾನಿಸಿದರು. ದೇವಳದಿಂದ ಅಭಿನಂದನಾ ಪತ್ರ, ಪ್ರಸಾದ ಹಸ್ತಾಂತರಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ವಿ.ಭಟ್, ಶೋಭಾ ಗಿರಿಧರ್, ಶಿಷ್ಟಾಚಾರ ಅಧಿಕಾರಿ ಜಯರಾಂ ರಾವ್, ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.