

ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಲಿಂಕ್ ಪ್ರಕರಣದ ಪ್ರಮುಖ ಆರೋಪಿ ಆದಿತ್ಯ ಆಳ್ವನನ್ನು 7 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ.
ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಡ್ರಗ್ ಮಾಫಿಯಾ ಕೇಸ್ನ ಎ6 ಆರೋಪಿ ಆದಿತ್ಯ ಆಳ್ವ. ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರನಾಗಿರುವ ಆದಿತ್ಯ ತನ್ನ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಕಳೆದ ನಾಲ್ಕು ತಿಂಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಆದಿತ್ಯ ಕೊನೆಗೂ ಚೆನ್ನೈನ ಹೋಂಸ್ಟೇನಲ್ಲಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.
ಸಿಸಿಬಿ ಮನವಿ ಮೇರೆಗೆ ಆದಿತ್ಯ ಆಳ್ವನನ್ನು ಒಂದು ವಾರ ಸಿಸಿಬಿ ಕಸ್ಟಡಿಗೆ ಪಡೆಯುವಂತೆ ಮಂಗಳವಾರ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ.
ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದಿರುವ ನಟಿ ರಾಗಿಣಿ, ಸಂಜನಾ, ವಿರೇನ್ ಖನ್ನ ಸೇರಿದಂತೆ ಸಾಕಷ್ಟು ಜನರೊಂದಿಗೆ ಆದಿತ್ಯ ನಿಕಟ ಸಂಪರ್ಕ ಹೊಂದಿದ್ದ. ಡ್ರಗ್ಸ್ ಕೇಸ್ನಲ್ಲಿ ಆದಿತ್ಯ ಆಳ್ವನ ಪಾತ್ರ ಇರುವುದು ಖಚಿತವಾದ ಬೆನ್ನಲ್ಲೇ ಹೆಬ್ಬಾಳದಲ್ಲಿರುವ ಮನೆ ಹಾಗೂ ರೆಸಾರ್ಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡ್ರಗ್ಸ್ ಪತ್ತೆಯಾಗಿತ್ತು.