

ಉಡುಪಿ: ಪ್ರಕೃತಿಯೊಂದಿಗೆ ನಗರದ ದೃಶ್ಯಗಳನ್ನು ಸದಾ ಸ್ಮರಣೆಯಲ್ಲಿ ಇಡುವಂತೆ ಮಾಡುವ ಅದ್ಭುತ ಶಕ್ತಿ ಕಲಾವಿದರಲ್ಲಿದೆ. ಇದು ಹೆಚ್ಚು ವ್ಯಾಪಕವಾಗಬೇಕು ಎಂದು ಮಾಹೆಯ ಸಹ ಕುಲಾಧಿಪತಿ ಡಾ. ಕಾರ್ಕಳ ಶರತ್ ಕುಮಾರ್ ಹೇಳಿದರು.
ಶುಕ್ರವಾರ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಮಣಿಪಾಲ ಕೆ ಎಂ ಸಿ ವೈದ್ಯಕೀಯ ವಿದ್ಯಾರ್ಥಿನಿ ಡಾ. ಸಾಲ್ವ್ಯ ಎಸ್. ರಾಜ್ ಅವರು ಮಣಿಪಾಲ ಕುರಿತಾಗಿ ರಚಿಸಿದ ಮೈ ಮಣಿಪಾಲ್ ಜಲವರ್ಣ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಸಾಲ್ವ್ಯ ಚಿತ್ರಕಲೆಯತ್ತ ಆಸಕ್ತಿ ಹೊಂದಿರುವುದು ಶ್ಲಾಘನರ್ಹ. ವಿಶೇಷವಾಗಿ ಉಡುಪಿ -ಮಣಿಪಾಲದ ಕುರಿತಾಗಿ ಜಲವರ್ಣ ಚಿತ್ರಗಳು ನಿರ್ಮಿಸಿರುವುದು ಕಲಾ ಸಂಗ್ರಹಕಾರರಿಗೆ ಉತ್ತೇಜನೆ ನೀಡಿದೆ. ಕಲಾವಂತರಿಗೆ, ಕಲಾಸಕ್ತರಿಗೆ ಅದಿತಿ ಗ್ಯಾಲರಿ ಹೊಸ ಸ್ವರೂಪದಲ್ಲಿ ಕಲಾಶ್ರಯ ನೀಡುತ್ತಿದೆ ಎಂದು ಹೇಳಿದರು.
ಕೆ ಎಂ ಸಿ ಯ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮೈ ಮಣಿಪಾಲ ಸ್ಟಿಕ್ಕರ್‌ಗಳನ್ನು ಹಾಗೂ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ರವಿರಾಜ್ ಆಚಾರ್ಯ ವಿಶೇಷ ಕಾರ್ಡಗಳನ್ನು ಅನಾವರಣಗೊಳಿಸಿದರು. ಗ್ಯಾಲರಿಯ ಆಡಳಿತ ವಿಶ್ವಸ್ಥ ಡಾ . ಕಿರಣ್ ಆಚಾರ್ಯ ಸ್ವಾಗತಿಸಿ, ಕಲಾವಿದೆ ಡಾ. ಸಾಲ್ವ್ಯ ಎಸ್. ರಾಜ್ ವಂದಿಸಿದರು.