ಚೈತನ್ಯ ಜಾಗೃತಕ್ಕೆ ಆದಿಶಂಕರಾಚಾರ್ಯರು ಪ್ರೇರಣೆ

BIRUR darmika
ಬೀರೂರು ಶ್ರೀ ಪಟ್ಟಾಭಿರಾಮ ಚಂದ್ರಮೌಳೀಶ್ವರ ದೇವಾಲಯದಲ್ಲಿ ಎಡತೊರೆ ಶ್ರೀ ಶಂಕರಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ಬೀರೂರು: ದಿವ್ಯದೃಷ್ಟಿಯ ಆಧ್ಯಾತ್ಮಿಕ ಸಾಧನೆ ಮೂಲಕ ಆದಿಶಂಕರಾಚಾರ್ಯರು ನಮ್ಮೊಳಗಿನ ಚೈತನ್ಯ ಜಾಗೃತಗೊಳಿಸಿಕೊಳ್ಳಲು ಪ್ರೇರಕರಾಗಿದ್ದಾರೆ ಎಂದು ಎಡತೊರೆ ಯೋಗಾನಂದೇಶ್ವರ ಮಠದ ಶ್ರೀ ಶಂಕರಭಾರತೀ ಸ್ವಾಮೀಜಿ ತಿಳಿಸಿದರು.

ಶ್ರೀ ಪಟ್ಟಾಭಿರಾಮ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೋಮವಾರ ವೇದಾಂತ ಭಾರತೀಯಿಂದ ಆಯೋಜಿಸಿದ್ದ ಶಂಕರಾಚಾರ್ಯ ವಿರಚಿತ ಕಲ್ಯಾಣ ವೃಷ್ಟಿಸ್ತವಃ ಶಿವಪಂಚಾಕ್ಷರ ನಕ್ಷತ್ರಮಾಲಾ ಹಾಗೂ ಲಕ್ಷ್ಮೀನರಸಿಂಹ ಕರಾಣಾರಸ ಸ್ತ್ರೋತ್ರ ಪಾರಾಯಣ ಅಭಿಯಾನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧಿಪತಿ ಶ್ರೀ ಭಾರತೀತೀರ್ಥ ಸ್ವಾಮೀಜಿ ಸನ್ಯಾಸತ್ವ ಸ್ವೀಕರಿಸಿ 50 ವರ್ಷ ಪೂರೈಸಿರುವ ಸಂದರ್ಭದಲ್ಲಿ ಪೀಠದ ಶ್ರೀ ವಿಧುಶೇಖರ ಭಾರತೀ ಶ್ರೀಗಳ ಆದೇಶ, ಅನುಗ್ರಹದಂತೆ ವೇದಾಂತಭಾರತೀ ಮೂಲಕ ನಡೆಸಲ್ಪಡುತ್ತಿರುವ ಈ ಅಭಿಯಾನ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದರಕ್ಕೆ ಹರ್ಷ ವ್ಯಕ್ತಪಡಿಸಿದರು.
ಬ್ರಾಹ್ಮಣ ಸಮಾಜ ಅಧ್ಯಕ್ಷ ಕೆ.ಜಿ.ಮಂಜುನಾಥ್ ಮಾತನಾಡಿ, ಶಂಕರತತ್ವ ಪ್ರಸಾರ ಕಾರ್ಯದಲ್ಲಿ ಎಡತೊರೆ ಯೋಗಾನಂದೇಶ್ವರ ಮಠ ಮುಂಚೂಣಿಯಲ್ಲಿದೆ. ಹಲವು ಕಾರ್ಯಕ್ರಮಗಳ ಮೂಲಕ ಸನಾತನ ಧರ್ಮದ ರಕ್ಷಣೆ ಹಾಗೂ ನಮ್ಮಲ್ಲಿ ಆಧ್ಯಾತ್ಮಿಕ ಮೌಲ್ಯ ಜಾಗೃತಿ ಮೂಡಿಸುತ್ತಿದೆ. ಶ್ರೀ ಶಂಕರ ಭಾರತೀ ಶ್ರೀಗಳ ಅವಿರತ ಪರಿಶ್ರಮದಿಂದ ಶಂಕರರ ಚಿಂತನೆಯನ್ನು ಜಗತ್ತಿಗೆ ಪಸರಿಸುತ್ತಿದೆ ಎಂದರು.
ಶ್ರೀ ಶಂಕರಭಾರತೀ ಸ್ವಾಮೀಜಿ ಅವರಿಗೆ ಶ್ರೀರಾಮಸೇವಾ ಸಮಿತಿ ಹಾಗೂ ಭಕ್ತರಿಂದ ಫಲಸಮರ್ಪಣೆ, ಮಾತೆಯರಿಂದ ಕಲ್ಯಾಣವೃಷ್ಟಿಸ್ತವಃ ಸ್ತ್ರೋತ್ರಗಳ ಪಾರಾಯಣ ನೆರವೇರಿತು. ವಿವಿಧ ಮಹಿಳಾ ಮಂಡಳಿ ಸದಸ್ಯೆಯರು, ಶ್ರೀರಾಮಸೇವಾ ಸಮಿತಿ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net