

ಗಂಗಾವತಿ: ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರಕ್ಕೆ ಶ್ರಮಿಸಲಾಗುತ್ತಿದ್ದು, ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ತಾಲೂಕಿನ ಆನೆಗೊಂದಿ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆಯಿದ್ದು, ಕ್ಷೇತ್ರದ ಶಕ್ತಿ ದೇವತೆಯಾಗಿದ್ದಾಳೆ.
ಪೂಜೆ, ಹೋಮ ಸೇರಿ ವಿವಿಧ ಧಾರ್ಮಿ ಕಾರ್ಯಕ್ರಮಗಳ ಆಯೋಜನೆಗಾಗಿ ಸಮುದಾಯ ಭವನ, ಭಕ್ತರಿಗಾಗಿ ಶೌಚಗೃಹ, ಗೋಶಾಲೆಯಲ್ಲಿ ಶೆಡ್ ನಿರ್ಮಾಣ ಮತ್ತು ಗೋವುಗಳ ನಿರ್ವಹಣೆಗೆ ಅನುದಾನದ ವ್ಯವಸ್ಥೆ ಸೇರಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಯ್ಯ ಸ್ವಾಮೀಜಿ ಅವರೊಂದಿಗೆ ಅಭಿವೃದ್ಧಿ ಕುರಿತು ಚರ್ಚಿಸಿದರು.
ಶಾಸಕ ಗಾಲಿ ಜನಾರ್ದನ ರೆಡ್ಡಿ ದೇವಾಲಯದಿಂದ ನಿರ್ಗಮಿಸುತ್ತಿದ್ದಂತೆ ಮಾಜಿ ಸಚಿವ ಹಾಗೂ ಸ್ನೇಹಿತ ಬಿ.ಶ್ರೀರಾಮುಲು ದೇವಾಲಯಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ದೇವಾಲಯದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿ, ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದುಕೊಂಡರು. ದೇವಾಲಯದ ವ್ಯವಸ್ಥಾಪಕ ರಾಜಣ್ಣ ಸ್ವಾಮಿ ಇತರರಿದ್ದರು.