

ರಟ್ಟಿಹಳ್ಳಿ: ಆಟೋ ಚಾಲಕನೊಬ್ಬ ತನ್ನ ಆಟೋದ ಮೇಲೆ ಆದಿಶಕ್ತಿಯ ಮೂರ್ತಿ ಇಟ್ಟು ನವರಾತ್ರಿ ದೇವಿಗಳ ಹಾಡುಗಳೊಂದಿಗೆ ಪಟ್ಟಣದ ಎಲ್ಲೆಡೆ ಎರಡು ದಿನ ಕಾಲ ಓಡಾಡಿ ಗಮನ ಸೆಳೆದಿದ್ದಾರೆ.
ಆಟೋರಾಜ ಎಂದೇ ಕರೆಸಿಕೊಳ್ಳುವ ವೀರಪ್ಪ ಹೆಬ್ಬಳ್ಳಿ, ಕೊಲ್ಲಾಪುರದಿಂದ ಆದಿಶಕ್ತಿಯ ತಂದು ಆಟೋದ ಮೇಲೆ ಪ್ರತಿಷ್ಠಾಪಿಸಿ, ಹೂವು ಹಾಗೂ ಇತರ ಸಾಮಗ್ರಿಗಳಿಂದ ಅಲಂಕರಿಸಿದ್ದರು. ದೇವಿಯ ಗೀತೆಗಳನ್ನು ಹಾಕಿಕೊಂಡು ಪಟ್ಟಣದ ಗಲ್ಲಿ, ಓಣಿಗಳಲ್ಲಿ ಸುತ್ತಾಡಿ ಹಬ್ಬದ ಕಳೆ ಹೆಚ್ಚಿಸಿದ್ದಾರೆ. ಶೃಂಗರಿಸಿದ್ದ ಆಟೋ ಬಳಿ ಅನೇಕ ಜನರು ನಿಂತು ಫೋಟೋ ತೆಗೆಸಿಕೊಂಡರು. ಅಲ್ಲದೆ, ಕೆಲವರು ದೇಣಿಗೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ವೀರಪ್ಪ ಹೆಬ್ಬಳ್ಳಿ ಅವರು ಕೋವಿಡ್ ಸಂದರ್ಭದಲ್ಲಿ ರಟ್ಟಿಹಳ್ಳಿ, ಹಿರೇಕೆರೂರ ಮತ್ತು ರಾಣೆಬೆನ್ನೂರ ತಾಲೂಕಿನಲ್ಲಿ ಆಟೋದೊಂದಿಗೆ ಸಂಚರಿಸಿ ಕರೋನಾ ಕುರಿತು ಗೀತೆಗಳನ್ನು ಹಾಕಿ ಸಮಾಜಿಕ ಜಾಗೃತಿ ಮೂಡಿಸಿದ್ದರು. ಸ್ವಾತಂತ್ರ್ಯೊತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ತಮ್ಮ ಆಟೋಗೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿ ಜನರದೊಂದಿಗೆ ಸಂಭ್ರಮಿಸುತ್ತಾರೆ. ಅವರ ಸಮಾಜ ಸೇವೆ ಪರಿಗಣಿಸಿ ಜಿಲ್ಲಾಡಳಿತ 2022ರ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಿದೆ.