ಭಕ್ತರ ರಕ್ಷಕಿ ಆದಿಶಕ್ತಿ ಹಿತ್ತಲಮ್ಮ

ಅರಕಲಗೂಡು ತಾಲೂಕು ದೇವರಹಳ್ಳಿ ಗ್ರಾಮದ ಶ್ರೀ ಆದಿಶಕ್ತಿ ಹಿತ್ತಲಮ್ಮ ದೇವಾಲಯದ ಹೊರ ನೋಟ.
ಅರಕಲಗೂಡು ತಾಲೂಕು ದೇವರಹಳ್ಳಿ ಗ್ರಾಮದ ಶ್ರೀ ಆದಿಶಕ್ತಿ ಹಿತ್ತಲಮ್ಮ ದೇವಾಲಯದ ಹೊರ ನೋಟ.
Published on

ಅರಕಲಗೂಡು:  ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿನ ಪುರಾತನ ಕಾಲದ ಶ್ರೀ ಆದಿಶಕ್ತಿ ಹಿತ್ತಲಮ್ಮ ದೇವತೆಯ ಮಹಿಮೆ ಅಪಾರವಾಗಿದ್ದು, ಭಕ್ತರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾಳೆ.

ಶ್ರೀ ಚೌಡೇಶ್ವರಿ ಅವತಾರವೇ ಶ್ರೀ ಹಿತ್ತಲಮ್ಮ ಪವಾಡ ದೇವತೆ. ದೂರದೃಷ್ಟಿಯುಳ್ಳ ದೇವತೆಯನ್ನು ನಂಬಿ ಬಂದವರನ್ನು ಕೈ ಬಿಟ್ಟಿಲ್ಲ. ದೇವಿ ದರ್ಶನ ಮಾಡಿ ಹರಕೆ ಹೊತ್ತರೆ ಇಷ್ಟಾರ್ಥ ಫಲಗಳು ಈಡೇರುತ್ತವೆ ಎನ್ನುವ ಧಾರ್ಮಿಕ ನಂಬಿಕೆ ಇಂದಿಗೂ ಬಲವಾಗಿದೆ.

ದೇವರ ಹೆಸರಿನಿಂದಲೇ ಪ್ರಸಿದ್ಧಿ ಗಳಿಸಿರುವ ದೇವರಹಳ್ಳಿ ಗ್ರಾಮದಲ್ಲಿ ಐತಿಹಾಸಿಕ ಸಾರುವ ಹಲವಾರು ದೇವಸ್ಥಾನಗಳಿದ್ದು, ಈ ಪೈಕಿ ಶ್ರೀ ಹಿತ್ತಲಮ್ಮ ದೇವಾಲಯ ಕೂಡ ಶತಮಾನಗಳ ಐತಿಹ್ಯ ಹೊಂದಿದೆ.

ಗ್ರಾಮದ ಜನರು ಹಿಂದಿನ ಕಾಲದಲ್ಲಿ ಕೊಡಗು, ಧರ್ಮಸ್ಥಳ, ಕರಾವಳಿ ಭಾಗದ ಕಡೆಗೆ ಗದ್ದೆ ಕೊಯ್ಲು ಸೇರಿದಂತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಒಮ್ಮೆ ಕರಾವಳಿ ಭಾಗದ ನದಿಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಹೊಳೆಯಲ್ಲಿ ಪ್ರತ್ಯಕ್ಷವಾದ ಮೂರು ಕಲ್ಲುಗಳನ್ನು ಕೈಯಿಂದ ಕದಲಿಸದೆ ತಮ್ಮೂರಿಗೆ ಕೊಂಡೊಯ್ದು ಪ್ರತಿಷ್ಠಾಪಿಸುವಂತೆ ಆಶರೀರವಾಣಿ ನುಡಿದಿವೆ. ಅದರಂತೆ ಆ ಕಲ್ಲುಗಳನ್ನು ದೇವರಹಳ್ಳಿಗೆ ತಂದು ಹಿರಿಯರ ಸಮ್ಮುಖದಲ್ಲಿ ಊರ ಮಧ್ಯಭಾಗದಲ್ಲಿದ್ದ ಹಿತ್ತಲಲ್ಲಿ ಪ್ರತಿಷ್ಠಾಪಿಸಿ ರಕ್ಷಣೆಗಾಗಿ ಸುತ್ತಲೂ ಮೂರು ಕಲ್ಲು ಚಪ್ಪಡಿಗಳನ್ನು ಅಳವಡಿಸಿ ಗುಡಿ ಸ್ಥಾಪಿಸಲಾಯಿತು ಅಂದಿನಿಂದ ಗ್ರಾಮಸ್ಥರು, ಭಕ್ತರು ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ ಎನ್ನುವ ಪ್ರತೀತಿ ಇದೆ.

ದೇವರಹಳ್ಳಿಗೆ ಐದು ಕಿಮೀ ಅಂತರದಲ್ಲಿರುವ ತಾಲೂಕು ಕೇಂದ್ರ ಅರಕಲಗೂಡು ಗ್ರಾಮದೇವತೆ ಶ್ರೀ ದೊಡ್ಡಮ್ಮ ದೇವಸ್ಥಾನದಂತೆಯೇ ಧಾರ್ಮಿಕವಾಗಿ ಶ್ರೀ ಹಿತ್ತಲಮ್ಮ ದೇವಸ್ಥಾನಕ್ಕೂ ವಿಶೇಷ ಹೆಸರಿದೆ. ದೇವಸ್ಥಾನದಲ್ಲಿ ಹಿಂದೆ ಗುರುವಾರ, ಶುಕ್ರವಾರ, ಭಾನುವಾರ ಮತ್ತು ಮಂಗಳವಾರ ವಿಶೇಷ ಪೂಜೆ ನಡೆಯುತ್ತಿತ್ತು. ದೂರದೃಷ್ಟಿ ಬೀರುವ ದೇವತೆಗೆ ದೂರದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆ ಸಲ್ಲಿಸಿ ಹರಕೆ ಹೊರುವುದು ವಾಡಿಕೆಯಾಗಿದೆ. ಸಂತಾನ ಪ್ರಾಪ್ತಿ, ಕಷ್ಟಕಾರ್ಪಣ್ಯಗಳ ನಿವಾರಣೆಗೆ ಹರಕೆ ಹೊತ್ತರೆ ಈಡೇರುವುದು ಶತಃಸಿದ್ಧ. ಭಕ್ತರ ನಂಬಿಕೆ ಕೂಡ ಹುಸಿಯಾಗಿಲ್ಲ ಎನ್ನುವುದಕ್ಕೆ ಹಲವು ಪುರಾವೆಗಳು ಕೂಡ ಇವೆ. ಮಕ್ಕಳಾಗದ ಅದೆಷ್ಟೋ ಮಹಿಳಾ ಭಕ್ತರಿಗೆ ಸಂತಾನ ಪ್ರಾಪ್ತಿ ಲಭಿಸಿದೆ. ಜತೆಗೆ ಇಷ್ಟಾರ್ಥ ಫಲಗಳೂ ಕೈಗೂಡಿವೆ ಎನ್ನುತ್ತಾರೆ ಹಿರಿಯರು.

ಪುರಾತನ ಕಾಲದ ಶ್ರೀ ಹಿತ್ತಲಮ್ಮ ದೇವಸ್ಥಾನ ತೀರ ಶಿಥಿಲಾವಸ್ಥೆಗೆ ತಲುಪಿತ್ತು. ದೇಗುಲದ ಅಭಿವೃದ್ಧಿಗೂ ಹಲವು ಸಲ ಅಡೆತಡೆಗಳು ಎದುರಾಗಿದ್ದವು. ಇದರಿಂದ ದೇವಿ ಸನ್ನಿಧಿಗೆ ಬರುವ ಭಕ್ತರ ಅಸಮಾಧಾನಕ್ಕೂ ಇದು ಕಾರಣವಾಗಿತ್ತು. ಇದನ್ನು ಮನಗಂಡು ಗ್ರಾಮಸ್ಥರು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ತೀರ್ಮಾನ ಕೈಗೊಂಡಿದ್ದರು. ಅದರಂತೆ ಆರಂಭದಲ್ಲಿ ಸಮಾಜ ಸೇವಕ ಸಿ.ಡಿ.ದಿವಾಕರಗೌಡ ಅವರು ಅಡಿಗಲ್ಲು ಹಾಕಿದ್ದರು. ತದನಂತ ದಾನಿಗಳಾದ ಕೆ.ಟಿ.ಲೋಕೇಶ್, ಗ್ರಾಮದ ಡಿ.ಇ. ಸ್ವಾಮಿ, ಪ್ರಸನ್ನ ಕುಮಾರ್, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮುಂತಾದ ಗಣ್ಯರು ಸಹಾಯಕ್ಕೆ ಮುಂದಾದರು. ಇದೀಗ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ದೇವಸ್ಥಾನ ಕಾಯಕಲ್ಪ ಭಾಗ್ಯ ಕಂಡಿದೆ. ಶಿಥಿಲಾವಸ್ಥೆ ತಲುಪಿ ಕೊನೆಯ ದಿನಗಳನ್ನು ಎಣಿಸುತ್ತಿದ್ದ ಶ್ರೀ ಆದಿಶಕ್ತಿ ಹಿತ್ತಲಮ್ಮ ದೇವಸ್ಥಾನ ಜೀರ್ಣೋದ್ಧಾರವಾಗಿ ಲೋಕಾರ್ಪಣೆ ಆಗಿರುವುದರಿಂದ ಗ್ರಾಮಸ್ಥರು ಹಾಗೂ ಭಕ್ತರ ಸಂತಸವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

ಶ್ರೀ ಆದಿಶಕ್ತಿ ಹಿತ್ತಲಮ್ಮ ದೇವತೆ ದೇವರಹಳ್ಳಿ ಗ್ರಾಮದಲ್ಲಿ ಅನೇಕ ತಲೆಮಾರುಗಳಿಂದ ನೆಲೆ ನಿಂತಿರುವ ಮಹಾನ್ ಶಕ್ತಿ ದೇವಿ. ಕರು ಹಾಕಿದ ಹಸುವಿನ ಗಿಣ್ಣು, ಮೊಸರನ್ನ ಎಡೆ ಇಟ್ಟು ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆ. ದೂರದ ಊರುಗಳಿಂದಲೂ ಸಾಕಷ್ಟು ಭಕ್ತರು ದೇವಿಯ ಸನ್ನಿಧಿಗೆ ಬಂದು ಹರಕೆ ಹೊರುತ್ತಾರೆ. ತಮ್ಮ ಬೇಡಿಕೆಗಳು ಈಡೇರಿದ ನಂತರ ತಾವು ಹೊತ್ತ ಹರಕೆ ತೀರಿಸುತ್ತಾರೆ. ದೇವಿ ಎಂದೂ ನಂಬಿದ ಭಕ್ತರ ಕೈಬಿಟ್ಟಿಲ್ಲ. ಭಕ್ತರು ಸಹ ದೇವಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಶ್ರೀ ಆದಿಶಕ್ತಿ ಹಿತ್ತಲಮ್ಮ ದೇವತೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿದೇವಿ. ಗ್ರಾಮಸ್ಥರು, ಭಕ್ತರು ಹಿಂದಿನಿಂದಲೂ ದೇವತಾ ಪೂಜೆ ಕಾರ್ಯಗಳನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ. ಶೋಚನೀಯ ಸ್ಥಿತಿಗೆ ತಲುಪಿದ್ದ ಪುರಾತನ ದೇವಸ್ಥಾನ ಇದೀಗ ದಾನಿಗಳ ಸಹಕಾರದಿಂದ ಅಭಿವೃದ್ಧಿ ಕಂಡಿರುವುದು ಹೆಚ್ಚಿನ ಸಂತೋಷ ತಂದಿದೆ.

ಗಣೇಶ್ ವೇಲಾಪುರಿ ಗ್ರಾಮಸ್ಥ

ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆ ಮಾತಿನಂತೆ ಶ್ರೀ ಆದಿಶಕ್ತಿ ಹಿತ್ತಲಮ್ಮ ದೇವಿ ದೂರದ ಊರಿನಿಂದ ಬರುವ ಭಕ್ತರಿಗಷ್ಟೇ ಅಲ್ಲ ಸ್ಥಳೀಯ ಭಕ್ತರಿಗೂ ಅನುಗ್ರಹ ಕಲ್ಪಿಸಿದ್ದಾಳೆ. ಭಕ್ತಿ ಭಾವದಿಂದ ಪೂಜೆ ಪುನಸ್ಕಾರ ಸಲ್ಲಿಸಿದರೆ ಶಾಂತಿ ಮತ್ತು ನೆಮ್ಮದಿ ನೆಲೆಸಿ ಒಳಿತಾಗಲಿದೆ. ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಆದಷ್ಟು ಶೀಘ್ರ ಪೂರ್ಣವಾಗುವ ಆಶಯ ಕೂಡ ನನ್ನದಾಗಿತ್ತು. ಅದರಂತೆ ಲೋಕಾರ್ಪಣೆ ಕಾರ್ಯ ಸುಸೂತ್ರವಾಗಿ ಸಂಪನ್ನಗೊಂಡಿದೆ. ದೇವಿ ದರ್ಶನ ಭಾಗ್ಯ ಪಡೆಯುವುದೇ ಭಕ್ತರ ಪುಣ್ಯದ ಕೆಲಸ.

ಮಲ್ಲಿಕಾರ್ಜುನಸ್ವಾಮಿ ದೊಡ್ಡಮಠ, ಅರಕಲಗೂಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net