

ಮಾಗಡಿ: ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಎಷ್ಟೇ ಹಣ, ಆಸ್ತಿ ಸಂಪಾದಿಸಿದರೂ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಕುದೂರು ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಭಾನುವಾರ ಆದಿಚುಂಚನಗಿರಿ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಮಹಾನಾಡು ಕಟ್ಟೇಮನೆ-ಹುಲಿಕಟ್ಟೆ ಕುಟುಂಬದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂದಿನ ಅನಾರೋಗ್ಯಕ್ಕೆ ಆಧುನಿಕ ಜೀವನ ಶೈಲಿಯೇ ಪ್ರಮುಖ ಕಾರಣ. ಬದಲಾದ ಜೀವನಶೈಲಿಯಿಂದ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಇಂದಿನ ಒತ್ತಡದ ಜೀವನ ಕ್ರಮದಿಂದಾಗಿ ಯಾರಿಗೂ ಆರೋಗ್ಯದ ಬಗ್ಗೆ ಗಮನ ಹರಿಸಲು ಸಮಯವಿಲ್ಲದಂತಾಗಿದೆ. ಪ್ರಕೃತಿಯ ಶಿಶುಗಳಾದ ನಾವು ಪ್ರಕೃತಿಯ ನಿಯಮಗಳನ್ನು ಮೀರಿ ಬದುಕುತ್ತಿದ್ದೇವೆ. ಇದರಿಂದ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. ಮಾನವ ಬದುಕಿನ ರೀತಿ ನೀತಿಗಳನ್ನು ಬದಲಾಯಿಸಿ ಶಿಸ್ತು ಅಳವಡಿಸಿಕೊಳ್ಳದೇ ಹೋದರೆ ಎಷ್ಟೇ ಆಸ್ಪತ್ರೆಗಳಿಗೆ ತಿರುಗಾಡಿದರೂ, ಎಷ್ಟೇ ಹಣ ಸುರಿದರೂ ಪ್ರಯೋಜನವಾಗುವುದಿಲ್ಲ ಎಂದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ. ಆದಿಚುಂಚನಗಿರಿ ಮಠ ಇಂದು ಆರೋಗ್ಯ, ಶಿಕ್ಷಣ ಮತ್ತು ದಾಸೋಹ ನೀಡುವ ಮುಖಾಂತರ ಸಂಸ್ಕೃತಿ ಮತ್ತು ಸಮಾಜವನ್ನು ಉಳಿಸುವಂತಹ ಪ್ರಯತ್ನ ಮಾಡುತ್ತಿದೆ. ಮಠ ಎಂದರೆ ಜಾತಿ, ಧರ್ಮ ನೆನಪಾಗುತ್ತದೆ. ಆದರೆ ಬಾಲಗಂಗಾಧರನಾಥ ಸ್ವಾಮೀಜಿಗಳು ಎಲ್ಲ ಧರ್ಮ, ಜಾತಿಗಳ ರಕ್ಷಣೆ ಮಾಡುವಂತಹ ಪ್ರಯತ್ನ ಮಾಡಿದ್ದರು. ಎಲ್ಲ ಸರ್ಕಾರಗಳು ನಿರಂತರವಾಗಿ ಆರೋಗ್ಯ ಸುಧಾರಣೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿವೆ. ಆದರೂ ಸಾಧ್ಯವಾಗುತ್ತಿಲ್ಲ.
ಇವತ್ತು ವಿಶ್ವದಲ್ಲಿ ವಿಜ್ಞಾನ, ತಂತ್ರಜ್ಞಾನ ಬೆಳೆದಿದೆ. ಮಾನವರು ಚಂದ್ರಲೋಕಕ್ಕೆ ಹೋಗಿದ್ದಾರೆ. ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಮಾತ್ರ ಆರೋಗ್ಯವಂತರಾಗಿ ಬಾಳಲು ಸಾಧ್ಯ. ಸಿರಿಧಾನ್ಯಗಳನ್ನು ಸೇವಿಸಿದರೆ ಅನೇಕ ರೋಗಗಳಿಂದ ದೂರವಿರಬಹುದು ಎಂದರು.ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಸರ್ಕಾರಗಳು ಸಾರ್ವಜನಿಕರಿಗೆ ಆರೋಗ್ಯ, ಶಿಕ್ಷಣ ಇವೆರಡನ್ನೂ ಯಶಸ್ವಿಯಾಗಿ ನೀಡಿದರೆ ದೇಶವನ್ನು ಶಕ್ತಿಯುತವಾಗಿ ಕಟ್ಟುವುದರಲ್ಲಿ ಅನುಮಾನವಿಲ್ಲ. ಗ್ರಾಮಿಣರ ಅನೂಕೂಲಕ್ಕಾಗಿ ಉಚಿತ ಆರೋಗ್ಯತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಕೂಟಗಲ್ ಹೋಬಳಿಯಲ್ಲಿ ಆರೊಗ್ಯ ಶಿಬಿರ ಏರ್ಪಡಿಸಲಾಗುವುದು. 2 ತಿಂಗಳಿಗೊಮ್ಮೆಉಚಿತ ಆರೋಗ್ಯ ಶಿಬಿರ ನಡೆಸಲಾಗುವುದು ಎಂದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ, ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕ ಕೆ.ಇ.ಬಿ.ರಾಜಣ್ಣ, ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಕುದೂರು ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಬಾಲರಾಜು, ಸದಸ್ಯ ಕೆ.ಟಿ.ವೆಂಕಟೇಶ್, ಜಿಪಂ ಮಾಜಿ ಸದಸ್ಯ ಸಿ.ಆರ್.ಗೌಡ, ಮರಿಗೌಡ, ಹನುಮಂತರಾಯಪ್ಪ, ಪ್ರಕಾಶ್ ಇತರರಿದ್ದರು.