ಜಾತಿ ಗಣತಿ ಮುಂದೂಡುವಂತೆ ಸರ್ಕಾರಕ್ಕೆ ಆದಿಚುಂಚನಗಿರಿ ಶ್ರೀ ಆಗ್ರಹ: ಸಮೀಕ್ಷೆ ನ್ಯೂನತೆ ಸರಿಪಡಿಸಿ

swamiji
Published on

ಬೆಂಗಳೂರು:ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯಲಿರುವ ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಯನ್ನು ಮುಂದೂಡುವಂತೆ ಸರ್ಕಾರಕ್ಕೆ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು, ರಾಜ್ಯ ಒಕ್ಕಲಿಗರ ಸಂಘ ಹಾಗೂ ರಾಜಕೀಯ ನಾಯಕರು ಸಲಹೆ ನೀಡಿದ್ದಾರೆ.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ಸಮೀಕ್ಷೆ ನಡೆಸಲು ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಆದರೆ, ಸಮೀಕ್ಷೆಯಲ್ಲಿ ಸಮುದಾಯದ ಹೆಸರಲ್ಲಿ ‘ಕ್ರಿಶ್ಚಿಯನ್ ಒಕ್ಕಲಿಗ’, ಜೈನ ಒಕ್ಕಲಿಗ’ ಸೇರಿ ಬೇರೆ ಧರ್ಮಗಳ ಹೆಸರನ್ನು ಸೇರಿಸಿರುವುದು ತಪ್ಪು. ಮುಂದಿನ ದಿನಗಳಲ್ಲಿ ಇದು ‘ಮುಸ್ಲಿಂ ಒಕ್ಕಲಿಗ’, ‘ಮುಸ್ಲಿಂ ಹಿಂದು’ ಎಂದು ಬರಬಹುದಲ್ಲವೇ? ಇಂತಹ ಹಲವು ಅಂಶಗಳು ನ್ಯೂನತೆಯಿಂದ ಕೂಡಿವೆ. ಇವುಗಳನ್ನು ಈಗಿನ ಪ್ರಜ್ಞಾವಂತ ಸರ್ಕಾರ ಬಗೆಹರಿಸಬೇಕು. ಈ ಬಗ್ಗೆ ಆಯೋಗವೂ ಆಮೂಲಾಗ್ರವಾಗಿ ಚರ್ಚಿಸಿ ಅರ್ಥಪೂರ್ಣವಾಗಿ ಸಮೀಕ್ಷೆ ನಡೆಸಬೇಕು ಎಂದು ಶ್ರೀಗಳು ಹೇಳಿದರು.

ರಾಜ್ಯದಲ್ಲಿ ಏಳೂವರೆ ಕೋಟಿ ಜನಸಂಖ್ಯೆ ಇದೆ. 15 ದಿನದಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. 15 ದಿನಗಳ ಪೈಕಿ 10 ದಿನ ನವರಾತ್ರಿ ಇರುವುದರಿಂದ ಜನ ಹಬ್ಬದ ಸಂಭ್ರಮದಲ್ಲಿ ಇರುತ್ತಾರೆ. ರಜೆ ದಿನಗಳು ಬಂದಿರುವ ಕಾರಣ ಕೆಲವರು ಪ್ರವಾಸಕ್ಕೂ ತೆರಳುತ್ತಾರೆ. ವಾಸ್ತವ ಹೀಗಿರುವಾಗ, ತರಾತುರಿಯಲ್ಲಿ ಸಮೀಕ್ಷೆ ನಡೆಸಿದರೆ ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ. ಕಾಂತರಾಜ ಆಯೋಗ ತಯಾರಿಸಿದ್ದ ವರದಿಯು ಅವೈಜ್ಞಾನಿಕವಾಗಿತ್ತು. ಶೇ.30 ಸಮೀಕ್ಷೆ ನಡೆದಿರಲಿಲ್ಲ. ಇದೀಗ ಹೊಸ ಸಮೀಕ್ಷೆಯಲ್ಲಿ ಹಿಂದಿನ ತಪ್ಪು ಮರುಕಳಿಸಲು ಸರ್ಕಾರ ಅವಕಾಶ ನೀಡಕೂಡದು ಎಂದು ಶ್ರೀಗಳು ಹೇಳಿದರು.

ಸಮೀಕ್ಷೆ ವೇಳೆ ಜನರ ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಪಡೆದ ಮೇಲೆ ಗಣತಿದಾರರು ಪೂರ್ಣ ಮಾಹಿತಿ ಪಡೆದು ಅಪ್‌ಲೋಡ್ ಮಾಡಿದ ನಂತರ ಮನೆಯ ಯಜಮಾನನಿಗೆ ಅದರ ಪೂರ್ಣ ಮಾಹಿತಿ ಬರುವಂತಾಗಬೇಕು. ಸಮೀಕ್ಷೆ ಮಾಹಿತಿಯೂ ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತಿರಬೇಕು ಎಂದು ಶ್ರೀಗಳು ವಿವರಿಸಿದರು. ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ಖಚಾಂಚಿ ನೆಲ್ಲಿಗೆರೆ ಬಾಲು, ನಿರ್ದೇಶಕರು, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ನಾಗರಾಜ್, ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ ಸೇರಿ ಇತರ ಸ್ವಾಮೀಜಿಗಳು ಉಪಸ್ಥಿತರಿದ್ದರು.

ಒಕ್ಕಲಿಗ ಎಂದೇ ಬರೆಸಿ

ಸಮುದಾಯದವರು ಜಾತಿ ಕಾಲಂನಲ್ಲಿ ‘ಒಕ್ಕಲಿಗ’ ಎಂದೇ ಬರೆಸಬೇಕು. ಅಗತ್ಯ ಇದ್ದರಷ್ಟೇ ಉಪಪಂಗಡ ಬರೆಸಬೇಕು. ಈ ಸಮೀಕ್ಷೆಗೆ ನಮ್ಮ ವಿರೋಧವಿಲ್ಲ. ಆದರೆ, ನ್ಯಾಯಯುತ ಸಮೀಕ್ಷೆ ನಡೆಯಬೇಕು ಎಂದು ರಾಜ್ಯ ಒಕ್ಕಲಿಗರ ಸಂಘ ಅಧ್ಯಕ್ಷ ಕೆಂಚಪ್ಪಗೌಡ ಹೇಳಿದರು. ಜಾತಿಗಣತಿ ಬಗ್ಗೆ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ಸಲಹೆ ಕೊಟ್ಟಿದ್ದಾರೆ. ಸಮೀಕ್ಷೆ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ. ನಮ್ಮ ಜನಾಂಗದ ಜತೆ ಕೆಲ ಜಾತಿ ಸೇರ್ಪಡೆ ಮಾಡಿದ್ದು, ಅವುಗಳನ್ನು ತೆಗೆಯಬೇಕು. ಜಿಲ್ಲಾ, ತಾಲೂಕು, ಪಟ್ಟಣ, ಗ್ರಾಮಗಳಿಗೆ ಒಕ್ಕಲಿಗ ಸಮುದಾಯದವರು ಭೇಟಿ ನೀಡಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗಿ ಸಾವಿರಾರು ಸಂಘದ ನೌಕರರನ್ನು ನಿಯೋಜಿಸಿದ್ದೇವೆ ಎಂದರು.

ಕ್ರಿಶ್ಚಿಯನ್ ಒಕ್ಕಲಿಗ ಪದ ತೆಗೆಯಿರಿ

‘ಕ್ರಿಶ್ಚಿಯನ್ ಒಕ್ಕಲಿಗ’ ಸೇರಿ ಬೇರೆ ಧರ್ಮದ ಹೆಸರು ನಮೂದಿಸಿರುವ ಪದ ತೆಗೆಯಬೇಕು ಎಂದು ಶಿರಾದ ಸ್ಫಟಿಕಪುರಿ ಮಹಾ ಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಮನವಿ ಮಾಡಿದ್ದಾರೆ. ಕಾಲಂನಲ್ಲಿ ಹೊಸ ಜಾತಿಗಳನ್ನು ಸೃಷ್ಟಿಸಿ ಗೊಂದಲ ಉಂಟು ಮಾಡಲಾಗಿದೆ. ಈ ಬಗ್ಗೆ ಆಯೋಗ ಗಮನಹರಿಸಬೇಕು. ಆಯೋಗ ತೆಗೆದುಕೊಂಡಿರುವ ತೀರ್ಮಾನವನ್ನು ಸರ್ಕಾರಕ್ಕೆ ತಿಳಿಸಬೇಕು. ಆಮೇಲೆ, ಸರ್ಕಾರದಿಂದ ಗೆಜೆಟ್ ಹೊರಡಿಸಬೇಕು. ಆದರೆ, ಇದ್ಯಾವುದನ್ನೂ ಮಾಡದೆ ತರಾತುರಿಯಲ್ಲಿ ಸಮೀಕ್ಷೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.

ತೆಲಂಗಾಣದಲ್ಲಿ ಮೂರೂವರೆ ಕೋಟಿ ಜನಸಂಖ್ಯೆ ಇದೆ. ಅಲ್ಲಿನ ಸರ್ಕಾರ ಸಮೀಕ್ಷೆ ನಡೆಸಲು 3 ತಿಂಗಳು ತೆಗೆದುಕೊಂಡಿತ್ತು. ನಮ್ಮ ರಾಜ್ಯದಲ್ಲಿ ಏಳೂವರೆ ಕೋಟಿ ಜನಸಂಖ್ಯೆ ಇದೆ. ಆದರೆ, ಇಲ್ಲಿನ ಸರ್ಕಾರ, ಬರೀ 15 ದಿನದಲ್ಲಿ ಸಮೀಕ್ಷೆ ನಡೆಸಲು ಮುಂದಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸಮೀಕ್ಷೆ ನಡೆಸುವ ಮುನ್ನವೇ ಹಲವು ಗೊಂದಲಗಳು ಉಂಟಾಗುತ್ತಿವೆ. ಸಮೀಕ್ಷೆಯನ್ನು 60 ದಿನ ಮುಂದೂಡಿ ಗೊಂದಲ ಬಗೆಹರಿಸಬೇಕು.

ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net