ವಿವಿಯಲ್ಲಿ ಆದಿಚುಂಚನಗಿರಿ ಶ್ರೀ ಅಧ್ಯಯನ ಪೀಠ ಸ್ಥಾಪಿಸಲಿ

Adichunchagiri_Swamiji
Published on

ತುಮಕೂರು: ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾಗಿದ್ದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮೀಜಿಗಳು ಈ ನಾಡಿನ ಎರಡು ಕಣ್ಣುಗಳಿದ್ದಂತೆ ಎಂದು ಹಿರೇಮಠಾಧ್ಯಕ್ಷ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.

ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಶನಿವಾರ ಬಾಲಗಂಗಾಧರನಾಥ ಸ್ವಾಮೀಜಿ ಅವರ 11ನೇ ಪುಣ್ಯಸ್ಮರಣೆಯಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಶ್ರೀಗಳು, ಈ ಮಹಾಸಂತರಿಬ್ಬರು ತಮ್ಮ ಸೇವೆ, ಮಾರ್ಗದರ್ಶನದ ಮೂಲಕ ನಾಡಿಗೆ ಬೆಳಕಾಗಿದ್ದಾರೆ. ಅವರ ಆದರ್ಶಗಳು ಸದಾ ಸ್ಮರಣೀಯ ಎಂದರು.

ಬಾಲಗಂಗಾಧರನಾಥ ಸ್ವಾಮೀಜಿ ಬಡಜನರಿಗಾಗಿ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ತೆರೆದು, ಅನ್ನ, ಅಕ್ಷರ, ಆಸರೆ ನೀಡಿ, ನಿಜ ಅರ್ಥದಲ್ಲಿ ಜನರ ಮನಸ್ಸಿನಲ್ಲಿ ನಡೆದಾಡುವ ದೇವರಾಗಿಯೇ ಅಜರಾಮರರಾಗಿದ್ದಾರೆ. ಶ್ರೀಗಳ ಸೇವೆ ಅನನ್ಯ. ಸೇವೆ ಮೂಲಕ ಜನರ ಮನದಲ್ಲಿ ನೆಲೆಸಿದ್ದಾರೆ ಎಂದು ಸ್ಮರಿಸಿದರು.

ಆದಿಚುಂಚನಗಿರಿ ಶ್ರೀ ಅಧ್ಯಯನ ಪೀಠ: ತುಮಕೂರು ವಿಶ್ವವಿದ್ಯಾಲಯದಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಅಧ್ಯಯನ ಪೀಠ ಆರಂಭಿಸಿ ವಿದ್ಯಾರ್ಥಿಗಳು, ಯುವ ಜನರಿಗೆ ಶ್ರೀಗಳ ತತ್ವಾದರ್ಶಗಳನ್ನು ತಿಳಿಸುವ ಕಾರ್ಯ ಆಗಬೇಕಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಹೇಳಿದರು.

ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿಗಳು ನಾವು ಕಣ್ಣಾರೆ ಕಂಡ ದೇವರುಗಳು. ಶ್ರೀಗಳ ಆದರ್ಶಗಳನ್ನು ನಾವು ಪಾಲಿಸುವ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ರಾಮಮೂರ್ತಿ ಗೌಡ, ಮುಖಂಡರಾದ ದೊಡ್ಡಲಿಂಗಪ್ಪ, ಶ್ರೀನಾಥ್, ಟೂಡಾ ಮಾಜಿ ಅಧ್ಯಕ್ಷ ಸಿದ್ಧಲಿಂಗೇಗೌಡ, ಸಿಮೆಂಟ್ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net