

ಶನಿವಾರಸಂತೆ: ಬೆಂಗಳೂರಿನ ವಿದ್ಯಾನಗರದ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 17 ವರ್ಷದ ಬಾಲಕರ ವಿಭಾಗದ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗ ಪ್ರತಿನಿಧಿಸಿದ್ದ ಸೋಮವಾರಪೇಟೆ ತಾಲೂಕಿನ ಗೌಡಳ್ಳಿಯಲ್ಲಿರುವ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಹಮ್ಮದ್ ಸುಫೇಲ್, ಜಿ.ಆರ್.ಕೌಶಿಕ್ ಮತ್ತು ಸಂಜಯ್ ಮೈಸೂರು ವಿಭಾಗ ತಂಡವನ್ನು ಪ್ರತಿನಿಧಿಸಿದ್ದು, ಡಿ.25ರಂದು ಅಂಡಮಾನ್ ಮತ್ತು ನಿಕೋಬಾರ್‌ನ ಫೋರ್ಟ್‌ಬ್ಲೇರ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ತರಬೇತುದಾರ ಮತ್ತು ಗೌಡಳ್ಳಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಿ.ಇ.ಪ್ರವೀಣ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅಭಿನಂದಿಸಿದರು. ಬಳಿಕ ಮಾತನಾಡಿ, ಗ್ರಾಮೀಣ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಮುಂದಿದ್ದು ಕ್ರೀಡಾ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದಾರೆ. ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಕೀರ್ತಿ ತಂದುಕೊಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ನಮ್ಮ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದಲ್ಲಿದ್ದು, ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಪಡುವ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.