

ಕೆ.ಆರ್ ನಗರ: ಅನ್ನ ದಾಸೋಹ, ಆರೋಗ್ಯ, ಶಿಕ್ಷಣ-ಉದ್ಯೋಗ ಮತ್ತು ಜನ ಸೇವೆಯಲ್ಲಿ ಆದಿ ಚುಂಚನಗಿರಿ ಮಠ ಜಗತ್ತಿಗೆ ಮಾದರಿಯಾಗಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.
ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಮಠವು ವಿಶ್ವದ ಎಲ್ಲ ಮೂಲೆಗಳಲ್ಲಿಯೂ ಶಾಖಾ ಮಠ ತೆರೆಯುವ ಕೆಲಸ ಮಾಡುತ್ತಿರುವುದು ಒಕ್ಕಲಿಗ ಸಮಾಜ ಹೆಮ್ಮೆಪಡುವ ವಿಚಾರ ಎಂದರು.
ನಾಡಪ್ರಭು ಕೆಂಪೇಗೌಡರು ಸುಂದರ ಬೆಂಗಳೂರು ನಗರ ನಿರ್ಮಿಸುವ ಜತೆಗೆ ಸುತ್ತಮುತ್ತ ಕೆರೆ ಕಟ್ಟೆಗಳನ್ನು ಕಟ್ಟಿ ಅವುಗಳ ಜೀರ್ಣೋದ್ಧಾರ ಮಾಡುವ ಮೂಲಕ ಜಲಕ್ರಾಂತಿ ಮಾಡಿದ್ದು, ರೈತರು ಮತ್ತು ಜನರಿಗೆ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಅನೂಕೂಲ ಕಲ್ಪಿಸಿ ಜಾತ್ಯತೀತವಾಗಿ ಎಲ್ಲ ಸಮುದಾಯವನ್ನು ಸಂಘಟಿಸುವ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
ಕೆಂಪೇಗೌಡರ ನಂತರ ಕೆರೆ ಕಟ್ಟೆಗಳ ಅಭಿವೃದ್ಧಿಯೊಂದಿಗೆ ಕಾಲುವೆಗಳನ್ನು ತೆಗೆಸುವ ಮೂಲಕ ರೈತರಿಗೆ ಮತ್ತು ಸಾರ್ವಜನಿಕರಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದ ನಾಯಕರು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎಂದು ತಿಳಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ನೀಡುವ ಮೂಲಕ ನೀರಾವರಿ, ರಸ್ತೆ, ವಿದ್ಯುತ್ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಾಕಾರ ನೀಡಿ ಏತ ನೀರಾವರಿ ಅನುಷ್ಠಾನ ಹಾಗೂ ಕೆರೆ ಕಟ್ಟೆಗಳ ಆಧುನೀಕರಣ ದೇವಾಲಯಗಳ ಅಭಿವೃದ್ಧಿ ಸಮುದಾಯ ಭವನಗಳ ನಿರ್ಮಾಣ ಮಾಡಲು ಸಹಕಾರ ನೀಡಿದರು ಎಂದು ಶ್ಲಾಘಿಸಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದ ನಾಥ ಸ್ವಾಮೀಜಿ ಮಾತನಾಡಿ, ಒಕ್ಕಲಿಗ ಸಮುದಾಯದ ಕೆಂಪೇಗೌಡರ ಸಾಧನೆ ಮತ್ತು ಸಮಾಜಮುಖಿ ಕೆಲಸಗಳು ವಿಶ್ವಕ್ಕೆ ಮಾದರಿಯಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಂತ ಭೂಮಿಯನ್ನೇ ನೀಡುವ ಮೂಲಕ ಬೆಂಗಳೂರು ನಗರ ನಿರ್ಮಾಣ ಮಾಡಿದ ಅವರ ಕೆಲಸ ಅಜರಾಮರ ಎಂದರು.
ನಾಡಪ್ರಭುಗಳ ನಂತರ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ ಕೆ.ಸಿ.ರೆಡ್ಡಿ ರಾಜ್ಯದ ಅಭಿವೃದ್ಧಿಪರ ಕೆಲಸ ಮಾಡಿ ಜನ ಸಾಮಾನ್ಯರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿದ್ದರು. ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ಅವರು ಜನ ಮೆಚ್ಚುವ ಕೆಲಸ ಮಾಡಿದರು ಎಂದು ತಿಳಿಸಿದರು.
ಇದೇ ವೇಳೆ ಸಮುದಾಯ ಭವನದ ಮುಂದೆ ನೂತನವಾಗಿ ನಿರ್ಮಿಸಿರುವ ಗಣಪತಿ ದೇವಾಲಯ ಉದ್ಘಾಟಿಸಿ ಬಾಲಗಂಗಾದರನಾಥ ಶ್ರೀಗಳ ಕಂಚಿನ ಪುತ್ಥಳಿ ಅನಾವರಣ ಮಾಡಲಾಯಿತು.
ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ. ಎನ್.ಬಸಂತ್ ನಂಜಪ್ಪ, ಮೈಸೂರಿನ ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಸ್.ಪಿ.ತಮ್ಮಯ್ಯ, ತಾಲೂಕು ಸಂಘದ ಗೌರವಾಧ್ಯಕ್ಷ ಮಿರ್ಲೆ ಅಣ್ಣೇಗೌಡ, ಕಾರ್ಯಾಧ್ಯಕ್ಷ ಹೊಸಹಳ್ಳಿವೆಂಕಟೇಶ್, ಅಧ್ಯಕ್ಷ ಶಿವರಾಮು, ಉಪಾಧ್ಯಕ್ಷ ಎ.ಕುಚೇಲ, ಕಾರ್ಯದರ್ಶಿ ಸಿ.ಎಸ್.ರಾಮಲಿಂಗು, ನಿರ್ದೇಶಕರಾದ ಮಂಜುಗೌಡ, ರಾಧಾಕೃಷ್ಣ, ತಿಮ್ಮೇಗೌಡ, ಪ್ರಕಾಶ್, ಸಂತೋಷ್ ಗೌಡ, ಕೇಶವ, ಮಂಜುನಾಥ್ ಮತ್ತಿತರರು ಇದ್ದರು.