

ಚಿತ್ರದುರ್ಗ: ನಗರದ ಶ್ರೀ ಕಬೀರಾನಂದಾಶ್ರಮ ಆವರಣದಲ್ಲಿ ಸೋಮವಾರ ಸಂಜೆ 90ನೇ ಮಹಾಶಿವರಾತ್ರಿ ಮಹೋತ್ಸವಕ್ಕೆ ಶ್ರದ್ಧಾ, ಭಕ್ತಿಗಳೊಂದಿಗೆ ಚಾಲನೆ ದೊರೆಯಿತು.
ಸಾನ್ನಿಧ್ಯ ವಹಿಸಿದ್ದ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀ ಜಗದ್ಗುರು ಸಿದ್ಧಾರೂಢ ಪರಂಪರೆಯಲ್ಲಿ ಶಿವನಾಮ ಜಪಕ್ಕೆ ಮಹತ್ವವಿದೆ ಎಂದರು.
ಮನುಷ್ಯನೊಳಗೆ ದೊಡ್ಡ ಶಕ್ತಿಯನ್ನು ಮಂತ್ರ-ಜಪ-ತತ್ವಗಳಿಂದ ಅನಾವರಣಗೊಳಿಸಲು ಸಾಧ್ಯವಿದೆ. ಮನುಷ್ಯನ ಮನಸನ್ನು ಸರಿ ಮಾಡದೇ ಆತನ ಕೈಗೆ ಬಾಂಬ್ ಕೊಟ್ಟರೆ ಎಂಥ ಅನಾಹುತವಾಗುತ್ತದೆ ಎಂಬುದಕ್ಕೆ ಹಿರೋಶಿಮಾ ನಾಗಸಾಕಿ ದುರಂತದ ಉದಾಹರಣೆ ನಮ್ಮೆದುರು ಇದೆ ಎಂದು ತಿಳಿಸಿದರು.
ಇಂದ್ರೀಯಗಳ ಮೂಲಕ ಮನಸ್ಸೆಂಬ ಸರೋವರವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ನಿಷ್ಕಾಮ ಕರ್ಮ, ಉಪಾಸನೆ, ಧ್ಯಾನ ಮುಕ್ತಿ ಕಡೆಗೆ ಸಾಗುವ ಮಾರ್ಗ. ನಮ್ಮ ಅಂತಃಕರಣ ಶುದ್ಧವಾಗಿಲ್ಲದ ಮನುಷ್ಯನಿಂದ ಯಾವುದೇ ಪ್ರಯೋಜನವಾಗದು ಎಂದರು.
ನಮ್ಮ ಹಿರಿಯರು ಸನಾತನ ಜ್ಞಾನದ ಮೂಲಕ ಜಗತ್ತನ್ನು ನಡೆಸಿಕೊಂಡು ಬಂದಿದ್ದಾರೆ. ಇಂಥ ಮಹೋತ್ಸವಗಳಿಂದ ಸುಜ್ಞಾನದ ಕಡೆಗೆ ನಾವು ಸಾಗಬಹುದು, ನಮ್ಮ ದೇಹದ ಕಾಯಿಲೆಗಳಿಗೆ ಇಲ್ಲಿ ಅಧ್ಯಾತ್ಮ ಔಷಧ ಸಿಗುತ್ತದೆ, ಒಳ್ಳೆ ಸಂಸ್ಕಾರ ಸಿಗುತ್ತದೆ ಎಂದು ಹೇಳಿದರು.
ಸಾರ್ಥಕ ಜೀವನ ಕುರಿತು ಉಪನ್ಯಾಸ ನೀಡಿದ ಸಾಹಿತಿ ಎಂ.ಬಿ.ನಾಗರಾಜ್, ಅಕ್ಷರ ಜ್ಞಾನದಿಂದ ಪದವಿ, ಅಂತಸ್ತು ದೊರೆತರೆ, ಆತ್ಮ ಜ್ಞಾನ ಸಾರ್ಥಕ ಜೀವನಕ್ಕೆ ನೆರವಾಗುತ್ತದೆ ಎಂದರು.
ಅಂದು ಸಹ ಬಾಳ್ವೆಯ ಬದುಕಲು ನೆರವಾಗುವವರು ಇದ್ದರೆ, ಇಂದು ಕೆಡಿಸುವವರ ಸಂಖ್ಯೆ ಹೆಚ್ಚು. ದುರಾಸೆ ಅತಿಯಾಗಿದೆ. ಸಾಮಾಜಿಕ ಜಾಲತಾಣಗಳು ಸಂಬಂಧಗಳನ್ನು ಹದಗೆಡಿಸುತ್ತಿವೆ. ಇವತ್ತಿನ ಸನ್ನಿವೇಶದಲ್ಲಿ, ಗುರು-ಜಂಗಮ ಸೇವೆ, ದಾನದ ಮಹತ್ವವನ್ನು ಅರಿಯಲು ಇಂಥ ಮಹೋತ್ಸವಗಳು ಪ್ರೇರಣೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ರಾಮದುರ್ಗ ಶ್ರೀ ಗಾಳೇಶ್ವರ ಮಠದ ಶ್ರೀ ವೆಂಕಟೇಶ್ವರ ಮಹಾರಾಜ್, ಹುಬ್ಬಳ್ಳಿ ಜಡಿಸಿದ್ದೇಶ್ವರ ಮಠದ ಶ್ರೀ ರಾಮಾನಂದ ಭಾರತಿ ಸ್ವಾಮೀಜಿ, ಕುಂಬಾರ ಶ್ರೀಗಳು, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಜಿಪಂ ಡಿಎಸ್ ಡಾ.ರಂಗಸ್ವಾಮಿ, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದ ಧರ್ಮದರ್ಶಿ ಶ್ಯಾಮಾನಂದ ಬಾಳಪ್ಪ ಪೂಜಾರಿ ಇದ್ದರು. ವಿ.ಎಲ್.ಪ್ರಶಾಂತ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಸ್ವಾಗತ ಗೀತೆ ನೃತ್ಯವನ್ನು ನಡೆಸಿಕೊಟ್ಟರು.
ನಾಡಿನ ಏಕೈಕ ವಿಜ್ಞಾನಿ ಜಗದ್ಗುರು: ದೇಶದಲ್ಲೇ ಯಾರಾದರೂ ಏಕೈಕ ವಿಜ್ಞಾನಿ ಜಗದ್ಗುರು ಇದ್ದರೆ ಅದು ಆದಿಚುಂಚನಗಿರಿ ಶ್ರೀಗಳೆಂದು ಸಾನ್ನಿಧ್ಯ ವಹಿಸಿದ್ದ ಶಿವಲಿಂಗಾನಂದ ಶ್ರೀಗಳು ಹೇಳಿದರು. ಅಣು ವಿಜ್ಞಾನಿಯಾಗಿರುವ ಶ್ರೀಗಳು, ಪೂರ್ವಾಶ್ರಮದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಒಡನಾಡಿಯಾಗಿ ಕೆಲಸ ಮಾಡಿದ್ದವರು. ಇಂಥ ಜ್ಞಾನಿ ದೊರಕಿರುವುದು ನಾಡಿನ ಪುಣ್ಯವೆಂದು ಬಣ್ಣಿಸಿದರು. ಮಹೋತ್ಸವದ ನಡೆಯುತ್ತಿರುವ ಈ ನೂತನ ಸಭಾಮಂಟಪದ ನಿರ್ಮಾಣಕ್ಕೆ ಮಾಜಿ ಸಚಿವ ಅಂಜನೇಯ ನೀಡಿದ್ದ ನೆರವನ್ನು ಶ್ರೀಗಳು ಸ್ಮರಿಸಿದರು.
ಮಹೋತ್ಸವದಲ್ಲಿ ಇಂದು: ಸಂಜೆ 6.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ. ಸಾನ್ನಿಧ್ಯ-ಹುಬ್ಬಳ್ಳಿ-ಬಿಜಾಪುರ ಶ್ರೀ ಶಾಂತಾಶ್ರಮ ಷಣ್ಮುಖಾರೂಢ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ಮಂಗಳೂರು, ಕಬಳಿ, ಮೈಸೂರು ಹಾಗೂ ದಸರಿಘಟ್ಟ ಆದಿಚುಂಚನಗಿರಿ ಶಾಖಾ ಮಠಗಳ ಶ್ರೀಗಳು. ಅತಿಥಿಗಳು-ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಬಿ.ಮರಂಕಲ್ ಇತರರು.