

ಸೋಮವಾರಪೇಟೆ: ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಸೋಮವಾರ ಶ್ರೀ ಬಸವೇಶ್ವರ ದೇವಾಲಯದಲ್ಲಿ ಆದಿಶಕ್ತಿ ದುರ್ಗೆ ಪ್ರತಿಷ್ಠಾಪನಾ ಕಾರ್ಯ ಜರುಗಿತು.
ಬೆಳಗ್ಗೆ ಆನೆ ಕೆರೆಯಿಂದ ಗಂಗೆ ಪೂಜೆಯೊಂದಿಗೆ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಬಸವೇಶ್ವರ ದೇವಾಲಯಕ್ಕೆ ತಂದು ಪಂಚಾಮೃತ ಅಭಿಷೇಕದೊಂದಿಗೆ ನವ ದುರ್ಗೆಯರನ್ನು ಸ್ಥಾಪಿಸಲಾಯಿತು. ಸಂಜೆ ದೇವಿಗೆ ಹೂವಿನ ಅಲಂಕಾರ ಮಾಡಿ, ಕುಂಕುಮಾರ್ಚನೆ, ದೇವಿ ಮಹಾತ್ಮೆ ಪಾರಾಯಣ ಸೇರಿದಂತೆ ವಿಶೇಷ ಪೂಜೆ ಮಾಡಲಾಯಿತು.
ಈ ಸಂದರ್ಭ ಸಮಾಜದ ಯಜಮಾನ ಬಿ.ಪಿ.ಶಿವಕುಮಾರ್, ವೀರಶೈವ ಸಮಾಜದ ಶೆಟ್ಟರು ಬಿ.ಆರ್.ಮೃತ್ಯುಂಜಯ, ಖಜಾಂಜಿ ಎಚ್.ಎಸ್.ಯುವರಾಜ್, ಆಡಳಿತ ಮಂಡಳಿಯ ಸದಸ್ಯರಾದ ಗುರುಪ್ರಸಾದ್, ಅಕ್ಕನ ಬಳಗದ ಅಧ್ಯಕ್ಷರಾದ ಗೀತಾ ರಾಜ್, ಸಮಾಜದ ಸದಸ್ಯರಾದ ಮಣಿ ಯುವರಾಜ್, ಯಶೋದಾ ನಾಗೇಶ್, ಅಕ್ಕಮ್ಮ, ಅನುಪಮಾ ಇದ್ದರು.