

ಮಂಡ್ಯ: ರಾಜ್ಯ ಸರಕಾರ ಸಂಪೂರ್ಣ ಒಳ ಮೀಸಲಾತಿ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಆದಿ ಜಾಂಬವ ವಿಚಾರ ವೇದಿಕೆ ಅಧ್ಯಕ್ಷ ನಡಗಲಪುರ ಮಂಜುನಾಥ್ ಒತ್ತಾಯಿಸಿದರು.
ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರಿ ಆಯಾ ರಾಜ್ಯ ಸರ್ಕಾರಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿ ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಆದಾಗ್ಯೂ ಸಂಪೂರ್ಣ ಒಳಮೀಸಲಾತಿ ಜಾರಿಗೊಳಿಸದೇ ಮಾದಿಗ ಜನಾಂಗವನ್ನು ವಂಚಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುವ ಸಮುದಾಯಗಳ ವಿರುದ್ಧ ಪೊಲೀಸರ ಮೂಲಕ ದಲಿತರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯಸರ್ಕಾರ ಮಾಡುತ್ತಿದೆ. ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಒಳ ಮೀಸಲಾತಿ ಸೀಮಿತಗೊಳಿಸದೇ ಬಡ್ತಿ, ಬ್ಯಾಕ್‌ಲಾಗ್ ಹುದ್ದೆ, ರಾಜಕೀಯ ಕ್ಷೇತ್ರ, ಎಸ್ಸಿಪಿ/ಟಿಎಸ್ಪಿ ಬಜೆಟ್‌ನಲ್ಲೂ ಒಳಮೀಸಲಾತಿ ಜಾರಿ ಮಾಡಬೇಕು. ಜಾತಿ ಪ್ರಮಾಣ ಪತ್ರ ಪಡೆಯಲು ಆಗುತ್ತಿರುವ ವಿಳಂಬ ನೀತಿಯನ್ನು ಸರಿಪಡಿಸಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಶಿವಶರಣ ಮಾದರ ಚನ್ನಯ್ಯ ಸೇವಾ ಸಮಿತಿಯ ಅಧ್ಯಕ್ಷ ಬಿ.ಕೃಷ್ಣ, ಪ್ರಶಾಂತ್, ಶಾಂತಕುಮಾರ, ಮಹೇಶ್ ಇದ್ದರು.