ಆದಿಜಾಂಬವ ಸ್ಮಶಾನಕ್ಕೆ ದಾರಿ ಕಲ್ಪಿಸಿ

Published on

ತಿ. ನರಸೀಪುರ : ಬನ್ನೂರಿನ ಸುಭಾಷ್ ನಗರದಲ್ಲಿರುವ ಮಾದಿಗ(ಆದಿ ಜಾಂಬವ) ಸಮುದಾಯದ ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಪಟ್ಟಣದ ಹೃದಯ ಭಾಗದಲ್ಲಿರುವ ಕಾವೇರಿ ಸರ್ಕಲ್ನಲ್ಲೇ ಶವಸಂಸ್ಕಾರ ಮಾಡುತ್ತೇವೆ ಎಂದು ಪುರಸಭೆ ಸದಸ್ಯ ಶಿವಣ್ಣ ಎಚ್ಚರಿಸಿದರು.

ಕಾವೇರಿ ತೀರದ ಗ್ರಾಮಾಂತರ ಸರ್ವೆ ನಂ.1023/2 ರಲ್ಲಿ 16 ಗುಂಟೆ ಖರಾಬು ಜಮೀನನ್ನು ಸ್ಮಶಾನಕ್ಕಾಗಿ ನೀಡಲಾಗಿದೆ. ಜಮೀನಿನ ಮೂಲಕ ಸ್ಮಶಾನಕ್ಕೆ ಹೋಗಲು ರಸ್ತೆ ಸಂಪರ್ಕ ಇಲ್ಲ. ಈ ಬಗ್ಗೆ ಅನೇಕ ವರ್ಷಗಳಿಂದ ಮುಖ್ಯಮಂತ್ರಿ, ಕಂದಾಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ, ಜಿಲ್ಲಾಧಿಕಾರಿಗಳಿಗೆ ಹಲವಾರು ಮನವಿ ಪತ್ರ ನೀಡಿದ್ದರೂ ಫಲ ದೊರಕಿಲ್ಲ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಅಧಿಕಾರಿ ವರ್ಗವಾಗಲೀ ಅಥವಾ ಸರ್ಕಾರವಾಗಲಿ ಈಬಗ್ಗೆ ಯಾವುದೇ ಕ್ರಮ ವಹಿಸಿಲ್ಲ. ಇದು ನಿರ್ಲಕ್ಷ್ಯದ ಪರಮಾವಧಿ ಎಂದವರು ಆರೋಪಿಸಿದರು. ಮುಂಬರುವ ದಿನಗಳಲ್ಲಿ ಸಮುದಾಯದವರ ಸಾವು ಸಂಭವಿಸಿದರೆ ಕಾವೇರಿ ಸರ್ಕಲ್ನಲ್ಲೇ ಶವ ಹೂಳುವ ಅಥವಾ ಸುಡುವ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ಡಾ. ಬಾಬು ಜಗಜೀವನರಾಂ ಜನಕಲ್ಯಾಣ ಸಂಘದ ತಾಲೂಕು ಅಧ್ಯಕ್ಷ ಮಲಿಯೂರು ಶಂಕರ್, ಉಪಾಧ್ಯಕ್ಷ ಗೋವಿಂದರಾಜು, ಮುಖಂಡರಾದ ಮಾದೇಶ, ಬೈರಾಪುರ ಮಹದೇವಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net