ಹುಬ್ಬಳ್ಳಿ: ರಾಜ್ಯ ಸರ್ಕಾರ ಇತ್ತೀಚೆಗೆ ಸ್ವೀಕರಿಸಿರುವ ಜಾತಿ ಗಣತಿ ವರದಿಯಲ್ಲಿ ಆದಿಬಣಜಿಗ ಸಮಾಜವನ್ನು ಪ್ರತ್ಯೇಕವಾಗಿ ಗುರುತಿಸಿರುವುದು ಸ್ವಾಗತಾರ್ಹ ಎಂದು ಅಖಿಲ ಕರ್ನಾಟಕ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ ಸಂಟನಾ ಕಾರ್ಯದರ್ಶಿ ಶಿವಬಸು ಬಿ.ಕೆ. ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಪ್ರಕಾಶ ಹೆಗಡೆ ನೇತೃತ್ವದ ಆಯೋಗವು ಪ್ರವರ್ಗವಾರು ನಮ್ಮ ಜನಸಂಖ್ಯೆ 1.31 ಲಕ್ಷ ಎಂದು ಅಂದಾಜು ಮಾಡಿದೆ. ಈಗಲಾದರೂ ನಮ್ಮ ಸಮಾಜವನ್ನು ಪ್ರತ್ಯೇಕವಾಗಿ ಗುರುತಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.
ಆದಿ ಬಣಜಿಗ ಸಮಾಜವನ್ನು ಸರ್ಕಾರದ ಜಾತಿ ಗೆಜೆಟ್ ನಲ್ಲಿ ಸೇರಿಸಬೇಕು. 1893ರ ಮುಂಬೈ ಸಂಸ್ಥಾನದ ಬ್ರಿಟಿಷ್ ಜಾತಿ ಗೆಜೆಟಿಯರ್ ಪಟ್ಟಿಯಲ್ಲಿ ಈ ಸಮಾಜ ನಮೂದಾಗಿತ್ತು. ಅಂದಿನಿಂದ ಮತ್ತೆ ಸರ್ಕಾರದ ದಾಖಲೆಯಲ್ಲಿ ಇರಲಿಲ್ಲ ಎಂದರು.
ಜಾತಿ ಗಣತಿ ಸಂದರ್ಭದಲ್ಲಿ ತಮ್ಮ ಸಮಾಜವನ್ನು ಪರಿಗಣಿಸಬೇಕೆಂದು ಸಾಕಷ್ಟು ಬಾರಿ ಆಯೋಗಗಳಿಗೆ ಮನವಿ ಮಾಡಲಾಗಿತ್ತು. ಇದೀಗ ಬೇಡಿಕೆ ಈಡೇರಿದೆ. ಮುಂಬರುವ ದಿನಗಳಲ್ಲಾದರೂ ಸರ್ಕಾರದ ಸೌಲಭ್ಯಗಳು ಸಮಾಜದ ಮಕ್ಕಳಿಗೆ ಲಭ್ಯವಾಗಲಿ ಎಂದು ಆಶಿಸಿದರು.
ಸಮಿತಿಯ ಅಧ್ಯಕ್ಷ ಸದಾಶಿವ ಕಾರಡಗಿ, ವೈ.ಬಿ. ಪಾಟೀಲ, ಕಾಡಸಿದ್ದಪ್ಪ ಗೌರಿ, ಬಸವರಾಜ ಪೀರಣ್ಣವರ ಗೋಷ್ಠಿಯಲ್ಲಿದ್ದರು.