

ಗುರುಪುರ: ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ 8ರಿಂದ ಶ್ರೀ ದೇವರಿಗೆ ಕಲಶಾಭಿಷೇಕ ಆರಂಭಗೊಂಡಿದ್ದು, ಬೆಳಗ್ಗೆ 10.30ರ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಿತು.
ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಕುಡುಪು ನರಸಿಂಹ ತಂತ್ರಿ ನೇತೃತ್ವ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಸದಾಶಿವ ಭಟ್, ಪವಿತ್ರಪಾಣಿ ರಮೇಶ್ ಉಡುಪ ಮತ್ತು ಅರ್ಚಕ ವರ್ಗದ ಉಪಸ್ಥಿತಿಯಲ್ಲಿ ಪೂಜಾ ಕಾರ್ಯಕ್ರಮ ನೆರವೇರಿದವು. ದೇವಸ್ಥಾನದಲ್ಲಿ ಕಿಕ್ಕಿರಿದು ಭಕ್ತರು ತುಂಬಿದ್ದರು. ಸ್ವಯಂಸೇವಕರು ಭಕ್ತರಿಗೆ ಸೂಕ್ತ ನೆರವು ನೀಡುತ್ತಿದ್ದರು.
ನವೀಕೃತ ದೇವಸ್ಥಾನದಲ್ಲಿ ಮಾ.9ರಿಂದ ಬ್ರಹ್ಮಕಲಶ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿದ್ದು, ಮಧ್ಯಾಹ್ನ ಮತ್ತು ರಾತ್ರಿ ನಿರಂತರ ಅನ್ನಸಂತರ್ಪಣೆ ನಡೆದಿದೆ. ಬ್ರಹ್ಮಕಲಶೋತ್ಸವದ ದಿನವಾದ ಭಾನುವಾರ ಮಧ್ಯಾಹ್ನ ಅಂದಾಜು 20-25 ಸಾವಿರ ಭಕ್ತರು ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಅನ್ನಛತ್ರ ಸಹಿತ ದೇವಸ್ಥಾನದ ವಠಾರದಲ್ಲಿ ಸ್ವಚ್ಛತೆಗೆ ಮಹತ್ವ ನೀಡಲಾಗಿತ್ತು.
ಬ್ರಹ್ಮಕಲಶ ಸುಸೂತ್ರವಾಗಿ ನಡೆಯುವಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಜೀತ್ ಆಳ್ವ ಬೈಲು ಏತಮೊಗರುಗುತ್ತು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ, ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿವಿಧ ಸಮಿತಿ ಸಂಚಾಲಕರು ಮತ್ತು ಸದಸ್ಯರು, ಸ್ವಯಂಸೇವಕರು, ಊರ-ಪರವೂರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಬೈಲುಮಾಗಣೆ ಹತ್ತು ಸಮಸ್ತರು ಸಹಕರಿಸಿದ್ದಾರೆ.