

ಶಿವಮೊಗ್ಗ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ನಿರೀಕ್ಷೆಯಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿ ಶುಕ್ರವಾರ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯದ 31 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕಗೊಳಿಸಿ ಆದೇಶ ಹೊರಬಿದ್ದಿದ್ದು ಮಧು ಬಂಗಾರಪ್ಪ ಅವರಿಗೆ ತವರು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಸೊರಬ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಮಧು ಬಂಗಾರಪ್ಪ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಂಪುಟಕ್ಕೆ ಸೇರ್ಪಡೆ ಆಗಿದ್ದರು. ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನ ನೀಡಲಾಗಿತ್ತು. ಹಾಗಾಗಿ ಈ ಬಾರಿ ಮಧು ಬಂಗಾರಪ್ಪ ಅವರೇ ಉಸ್ತುವಾರಿ ಸಚಿವರಾಗುವ ನಿರೀಕ್ಷೆ ಹೆಚ್ಚಿತ್ತು. ಅದರಂತೆ ಮಧು ಬಂಗಾರಪ್ಪ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಸರ್ಕಾರದ ರಚನೆ ಬಳಿಕ ಇದೀಗ ಮುಂಬರುವ ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಇದೀಗ ಜಿಲ್ಲಾ ಉಸ್ತುವಾರಿ ನೇಮಕದ ಮೂಲಕ ಚುನಾವಣಾ ಅಖಾಡಕ್ಕೆ ಸಜ್ಜಾಗುವಂತೆ ಸೂಚಿಸಿದೆ.
ಮಧು ಬಂಗಾರಪ್ಪ ಅವರಿಗೆ ಮೊದಲ ಹಂತದಲ್ಲೇ ಶಿವಮೊಗ್ಗಕ್ಕೆ ಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಸಿಎಂ ಮತ್ತು ಡಿಸಿಎಂ ನಡುವಿನ ಹಗ್ಗಾ ಜಗ್ಗಾಟದಲ್ಲಿ ಎಂಟು ಮಂದಿಗೆ ಮಾತ್ರ ಮೊದಲ ಹಂತದಲ್ಲಿ ಸಚಿವ ಸ್ಥಾನ ದೊರೆತಿತ್ತು. ಹಾಗಾಗಿ ಎರಡನೇ ಹಂತದ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಗೆ ಪ್ರಾಧ್ಯಾನ್ಯತೆ ನೀಡಲಾಗಿತ್ತು.