

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಆದಿತ್ಯ ರಾವ್ ಅಸೌಖ್ಯಕ್ಕೀಡಾಗಿದ್ದು, ಚಿಕಿತ್ಸೆಗೆ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಾಗಿ ಗುರುತು ದೃಢೀಕರಣಕ್ಕಾಗಿ ಸಾಕ್ಷಿಗಳ ಮುಂದೆ ಬುಧವಾರ ನಡೆಯಬೇಕಾಗಿದ್ದ ಪರೇಡ್ ಮುಂದೂಡಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು.ಬೆಳ್ಳಿಯಪ್ಪ ನೇತೃತ್ವದ ತಂಡ 50ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿದೆ. ಈ ಪೈಕಿ ಆರೋಪಿ ಸ್ಫೋಟಕವಿರಿಸಿ ಪರಾರಿಯಾದ ದಿನ (ಜನವರಿ 20) ಆತನನ್ನು ಪ್ರತ್ಯಕ್ಷವಾಗಿ ಕಂಡಿದ್ದ 15 ಮಂದಿಯ ಎದುರು ಬುಧವಾರ ಪರೇಡ್ ನಡೆಸಲು ನಿರ್ಧರಿಸಲಾಗಿತ್ತು. 15 ಮಂದಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ, ಹೇಳಿಕೆ ದಾಖಲು ಮಾಡಿಸಲು ತನಿಖಾಧಿಕಾರಿಗಳು ನಿರ್ಧರಿಸಿದ್ದು, ಅದರಂತೆ ಮಂಗಳೂರು ತಹಸೀಲ್ದಾರ್‌ಗೆ ಪತ್ರ ಬರೆಯಲಾಗಿತ್ತು.
ನಡುವೆ ಮಲೇರಿಯಾ ಜ್ವರದಿಂದ ಬಳಲುತ್ತಿರುವ ಆದಿತ್ಯ ರಾವ್, ಆಸ್ಪತ್ರೆಯಲ್ಲಿರುವ ಕೈದಿಗಳ ಸೆಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.