

ಹಿರೀಸಾವೆ: ಯಾವುದೇ ಒಳ್ಳೆಯ ಕಾರ್ಯ ಕೈಗೊಳ್ಳುವಾಗ ಶುಭಗಳಿಗೆಯಲ್ಲಿ ಪ್ರಾರಂಭಿಸಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ನೂತನ ದೇಗುಲ ನಿರ್ಮಾಣದ ಪ್ರಯುಕ್ತ ಬುಧವಾರ ಅಧಿಷ್ಠಾನ ಪೂಜೆ ನೆರವೇರಿಸಿ ಮಾತನಾಡಿ, ಶುಭ ಎಂಬುದು ಯಶಸ್ಸಿನ ಸಂಕೇತ ಎಂದು ಆಶೀರ್ವಚನ ನೀಡಿದರು.
ಋಷಿ ಮುನಿಗಳ ತಪೋಭೂಮಿಯಾದ ಶ್ರೀ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆ ಇದ್ದು, ಭಕ್ತರ ಸಂಖ್ಯೆಗೇನು ಕೊರತೆ ಇಲ್ಲ. ಅಷ್ಟೇ ವೈಭವದ ಧಾರ್ಮಿಕ ಕೇಂದ್ರ ನಿರ್ಮಾಣ ಮುಖ್ಯ ಎಂದರು.
ಎರಡು ವರ್ಷಗಳ ಹಿಂದೆ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಶಿಲೆಗಳ ಕೆತ್ತನೆ ಕಾರ್ಯ ಪೂರ್ಣಗೊಂಡಿದೆ. ಅಧಿಷ್ಠಾನ ಪೂಜೆ ನೆರವೇರಿಸುವ ಮೂಲಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಭಕ್ತರ ಕೋರಿಕೆಯಂತೆ ಮುಂದಿನ ದಿನಗಳಲ್ಲಿ ಬೃಹತ್ ಧಾರ್ಮಿಕ ಕೇಂದ್ರ ಭಕ್ತರಿಗೆ ಫಲಿಸಲಿದೆ ಎಂದು ತಿಳಿಸಿದರು.
ಶ್ರೀ ಬಸವೇಶ್ವರ ಸ್ವಾಮಿಗೆ ಕುಂಕುಮಾರ್ಚನೆ ಹಾಗೂ ವಿವಿಧ ಅಭಿಷೇಕಗಳು ಜರುಗಿದ ಬಳಿಕ ವಿವಿಧ ಪುಷ್ಪಗಳಿಂದ ಅಲಂಕರಿಸಲಾಯಿತು. ಚುಂಚಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು.
ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿ ಶಾಖಾಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್.ವಾಸು, ದಿಡಗ ಗ್ರಾಪಂ ಮಾಜಿ ಅಧ್ಯಕ್ಷ ಎನ್.ಆರ್.ರತ್ನರಾಜ್, ಕಬ್ಬಳಿ ಗ್ರಾಪಂ ಮಾಜಿ ಅಧ್ಯಕ್ಷ ಶಿವನಂಜೇಗೌಡ, ಗುಡಿಗೌಡ ಪ್ರಕಾಶ್, ಪ್ರಮುಖರಾದ ಗಣೇಶ್ ಗೌಡ, ಜವರೇಗೌಡ, ಸತೀಶ್ ಇತರರು ಇದ್ದರು.