ನೈಸರ್ಗಿಕ ಕಲ್ಲುಬಂಡೆಯ ಮೇಲೆ ಮಾನವ ಪಾದದ ಚಿತ್ರ

pppppppppp
Published on




ಮಂಗಳೂರು : ಮಂಗಳೂರು ನಗರದ ಬೋಳೂರ ಪನ್ನೆಯ ಬಬ್ಬುಸ್ವಾಮಿ ದೈವಸ್ಥಾನದ ಸಮೀಪ ನೈಸರ್ಗಿಕ ಕಲ್ಲುಬಂಡೆಯ ಮೇಲೆ ಇದೇ ಮೊದಲ ಬಾರಿಗೆ ಮಾನವ ಪಾದದ ಚಿತ್ರ ಕಂಡುಬಂದಿದೆ. ಸ್ಥಳೀಯರು ಈ ಪಾದದ ಚಿತ್ರ ಬಬ್ಬುಸ್ವಾಮಿಯ ಪಾದದ ಚಿತ್ರಗಳೆಂದು ನಂಬಿದ್ದಾರೆ ಎಂದು ಮೂಲ್ಕಿ ಸುಂದರ್‌ರಾಮ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಈ ಪಾದಗಳು ಒಂದು ಅಡಿ ಉದ್ದ, ಅರ್ಧ ಇಂಚು ಆಳ ಹೊಂದಿದ್ದು, ಸಾಮಾನ್ಯ ಮಾನವ ಪಾದಗಳ ಅಳತೆಯನ್ನು ಹೊಂದಿವೆ.
ಬಬ್ಬುಸ್ವಾಮಿಯನ್ನು ಕೋಟೆದ ಬಬ್ಬು, ಕೋರ‌್ದಬ್ಬು, ಬಬ್ಬು ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ. ಪಡುಬಿದಿರೆಯ ಮಿಂಚಿನಬಾವಿ ಕೋರ‌್ದಬ್ಬು ಟ್ರಸ್ಟ್‌ನ ಸಹಯೋಗದೊಂದಿಗೆ ಬಬ್ಬುಸ್ವಾಮಿ ಪುರಾತತ್ತ್ವ ಅಧ್ಯಯನ ಯೋಜನೆಯನ್ನು ಮಾರ್ಚ್ ತಿಂಗಳಲ್ಲಿ ಆರಂಭಿಸಲಾಯಿತು. ಈ ಅಧ್ಯಯನ ಯೋಜನೆಯ ಭಾಗವಾಗಿ ಮಂಗಳೂರು ನಗರದ ಬೋಳೂರ ಪನ್ನೆಯ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಭೇಟಿ ನೀಡಿದಾಗ, ಈ ದೈವಸ್ಥಾನದ ಸಮೀಪ ಆದಿಮಕಲೆಯ ನಿವೇಶನ ಪತ್ತೆಯಾಗಿದೆ. ನೈಸರ್ಗಿಕ ಬಂಡೆಕಲ್ಲುಗಳ ಮೇಲೆ ಕುಟ್ಟಿ, ಕೆತ್ತಿ ಮಾಡಿದ ಚಿತ್ರಗಳನ್ನು ಆದಿಮ ಬಂಡೆಕಲ್ಲು ಚಿತ್ರಗಳೆಂದು ಕರೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬುದ್ಧನಜೆಡ್ಡು ಆದಿಮಕಲೆ ನಿವೇಶನದಲ್ಲಿ ಸುಮಾರು ಇಪ್ಪತ್ತು ಪಾದದ ಚಿತ್ರಗಳು ಕಂಡುಬಂದಿವೆ. ನೂತನ ಶಿಲಾಯುಗ ಕಾಲದ ಚಿತ್ರಗಳಿಂದ ಇತಿಹಾಸ ಆರಂಭ ಕಾಲದ ವರೆಗಿನ ಚಿತ್ರಗಳನ್ನು ಅಲ್ಲಿ ಗುರುತಿಸಲಾಗಿದೆ. ಅಲ್ಲಿ ಕಂಡು ಬಂದ ಪಾದದ ಚಿತ್ರಗಳನ್ನು ಸುಮಾರು ಕ್ರಿ.ಶ. 1ಮತ್ತು 2ನೇ ಶತಮಾನದ ಚಿತ್ರಗಳೆಂದು ನಿರ್ಧರಿಸಲಾಗಿದೆ. ಬೋಳಾರ ಪನ್ನೆಯ ಪಾದದ ಚಿತ್ರಗಳು ಸಹ ಕ್ರಿ.ಶ. 1 ಅಥವಾ 2ನೇ ಶತಮಾನಕ್ಕೆ ಸೇರಿದ ಚಿತ್ರಗಳಾಗಿದ್ದು, ಮಂಗಳೂರಿನ ಚಾರಿತ್ರಿಕ ಅಧ್ಯಯನಕ್ಕೆ ಮತ್ತು ಬಬ್ಬುಸ್ವಾಮಿ ಅಧ್ಯಯನಕ್ಕೆಅತ್ಯಂತ ಮಹತ್ವದ ಪುರಾತತ್ತ್ವ ಪುರಾವೆಯಾಗಿದೆ.
ಬಬ್ಬುಸ್ವಾಮಿಯ ಪಾಡ್ದನದ ಕೊನೆಯಲ್ಲಿ ಬಬ್ಬುಸ್ವಾಮಿಯನ್ನು ಕರಾವಳಿಯ ಉತ್ತರದಲ್ಲಿ ಅಂಕೋಲೆಯಿಂದ ದಕ್ಷಿಣದಲ್ಲಿ ಕಾಸರಗೋಡಿನ ನೀಲೇಶ್ವರದವರೆಗೆ ಆರಾಧಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ವಾಸ್ತವವಾಗಿ ಉಡುಪಿ ಮತ್ತು ದ.ಕ.ಜಿಲ್ಲೆಯಲ್ಲಿ ಮಾತ್ರ ಬಬ್ಬುಸ್ವಾಮಿಯನ್ನು ಬಹುತೇಕ ಎಲ್ಲ ಸಮುದಾಯದವರು ಆರಾಧಿಸುವುದು ಕಂಡುಬರುತ್ತದೆ. ಬಬ್ಬುಸ್ವಾಮಿ ಕರಾವಳಿಯ ಮುಂಡಾಲ/ಕೂಸಾಳ/ಆದಿ ದ್ರಾವಿಡರ ಆರಾಧ್ಯ ದೈವವಾಗಿದೆ. ಮಿಂಚಿನಬಾವಿ ಕೋರ‌್ದಬ್ಬು ಟ್ರಸ್ಟ್‌ನ ಟ್ರಸ್ಟಿ ರಮೇಶ್.ಯು., ಅಧ್ಯಕ್ಷ ವಾಮನ ಸಾಲಿಯಾನ್, ಪಿ. ಜಗ್ಗು ಮಲ್ಲಾರ್, ಜಿ. ಸುಂದರ್ ಗುಜ್ಜರಬೆಟ್ಟು, ಬಿ.ಪಿ.ನಾರಾಯಣ ಮತ್ತು ಆನಂದ್ ಎಲ್ಲೂರು ಅಧ್ಯಯನಕ್ಕೆ ಸಹಕರಿಸಿದ್ದರು ಎಂದು ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net