ಭೂಮಿ ಎಲ್ಲೋ, ಮಾಲೀಕ ಇನ್ನೆಲ್ಲೋ!

adhr
ಕೃಷಿ ಭೂಮಿ
Published on

ಪಹಣಿಗೆ ಆಧಾರ್‌ಲಿಂಕ್ ಪ್ರಹಸನ

ಕೋಟಿ ಆಸ್ತಿಯ ಒಡೆಯನಿಗೆ ಬೇಕಿಲ್ಲ ಸರ್ಕಾರಿ ಸೌಲಭ್ಯ?


ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಕೃಷಿ ಭೂಮಿಯ ಅಕ್ರಮ ನೋಂದಣಿಗೆ ಕಡಿವಾಣ ಹಾಕುವ ಜತೆಗೆ ರೈತನ ಜಮೀನಿಗೆ ಸುರಕ್ಷತೆ ಒದಗಿಸಲು ರಾಜ್ಯ ಸರ್ಕಾರ ಆರಂಭಿಸಿರುವ ‘ಪಹಣಿ ಆಧಾರ್ ಲಿಂಕ್’ಮಾಡುವ ಪ್ರಕ್ರಿಯೆ ಗ್ರಾಮಾಂತರ ಜಿಲ್ಲೆಯಲ್ಲಿ ಶೇ.100 ಗುರಿ ಸಾಧನೆ ಕಷ್ಟಸಾಧ್ಯ ಎನ್ನುವಂತಾಗಿದೆ.
ಹೌದು! ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಎಕರೆಗಟ್ಟಲೆ ಜಮೀನುಗಳನ್ನು ಹೊಂದಿರುವ ಮಾಲೀಕರು ನೆರೆ ಜಿಲ್ಲೆ ಹಾಗೂ ಹೊರರಾಜ್ಯದವರೇ ಆಗಿದ್ದಾರೆ. ಗ್ರಾಮಾಂತರ ಜಿಲ್ಲೆಯಲ್ಲಿ ಹತ್ತಿಪ್ಪತ್ತು ಎಕರೆಯಷ್ಟು ಜಮೀನು ಖರೀದಿಸಿ ಾರ್ಮ್‌ಹೌಸ್ ಮಾಡಿರುವ ಮಾಲೀಕರು ಈ ಆಧಾರ್‌ಲಿಂಕ್ ಯೋಜನೆಗೆ ಸ್ಪಂದಿಸುತ್ತಿಲ್ಲ. ಕಂದಾಯ ಸಿಬ್ಬಂದಿ ಕೇಳಿದ ದಾಖಲೆಗಳನ್ನು ನೀಡದೆ ನಿರಾಸಕ್ತಿ ತೋರಿಸುತ್ತಿದ್ದಾರೆ. ಅಲ್ಲದೆ ಇಂಥ ಮಾಲೀಕರನನ್ನು ಪತ್ತೆ ಹಚ್ಚುವುದೇ ಕಷ್ಟ ಎಂಬಂತ ಪರಿಸ್ಥಿತಿ ಇದೆ. ಹಲವು ಕಡೆಗಳಲ್ಲಿ ಎಕರೆಗಟ್ಟಲೆ ಜಾಗ ಬೀಡುಬಿದ್ದಿವೆ. ಇಂಥ ಜಮೀನುಗಳು ಜಿಲ್ಲೆಯಲ್ಲಿದ್ದರೆ ಮಾಲೀಕರು ಇನ್ನೆಲ್ಲೋ ವಾಸವಿದ್ದಾರೆ. ಇದರಿಂದಾಗಿ ಪಹಣಿಗೆ ಆಧಾರ್ ಲಿಂಕ್ ಪ್ರಕ್ರಿಯೆ ಗುರಿಮುಟ್ಟುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇದೆ. ಇನ್ನೂ ಜಿಲ್ಲೆಯಲ್ಲಿ ಕೋಟಿಗಟ್ಟಲೆ ಮೌಲ್ಯದ ಆಸ್ತಿ ಹೊಂದಿರುವ ನೆರೆ ರಾಜ್ಯದಲ್ಲಿನ ಮಾಲೀಕರಿಗೆ ಸರ್ಕಾರದ ಸೌಲಭ್ಯ ಬೇಕಿಲ್ಲ. ಭದ್ರತೆ ಬಗ್ಗೆ ಅವರಿಗೆ ಆತಂಕವೂ ಇಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆ ಬಗ್ಗೆ ಮಾಲೀಕರು ನಿರಾಸಕ್ತಿ ಹೊಂದಿದ್ದಾರೆ ಎಂಬ ಮಾತು ಅಧಿಕಾರಿ ವಲಯದಲ್ಲಿ ಕೇಳಿಬರುತ್ತಿದೆ.
ಶೇ.34 ಸಾಧನೆ: ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳನ್ನೊಳಗೊಂಡ ಗ್ರಾಮಾಂತರ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಪಹಣಿಗೆ ಆಧಾರ್‌ಲಿಂಕ್ ಮಾಡುವ ಪ್ರಕ್ರಿಯೆ ಆರಂಭಿಸುವ ಮೂಲಕ ಬೆವರು ಹರಿಸುತ್ತಿದೆ. ಆದರೆ ಇದುವರೆಗೆ ಶೇ.34 ಸಾಧನೆಯಾಗಿದ್ದು, ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ 22ನೇ ಸ್ಥಾನದಲ್ಲಿದೆ. ಪಹಣಿ ಲಿಂಕ್ ಬಗ್ಗೆ ಕಂದಾಯ ಇಲಾಖೆ ಜಿಲ್ಲಾದ್ಯಂತ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಹಳ್ಳಿಹಳ್ಳಿಗೂ ತೆರಳಿ ಸಿಬ್ಬಂದಿ ರೈತರಿಂದ ದಾಖಲೆ ಪಡೆದು ಸ್ಥಳದಲ್ಲೇ ಆಧಾರ್‌ಲಿಂಕ್ ಮಾಡುವ ಕೆಲಸ ಮಾಡುತ್ತಿದೆ. ಸಣ್ಣ ಪುಟ್ಟ ರೈತರ ಜಮೀನುಗಳಿಗೆ ಪಹಣಿ, ಆಧಾರ್ ಲಿಂಕ್‌ನಲ್ಲಿ ಯಶಸ್ವಿಯಾಗಿದ್ದರೂ ಎಕರೆಗಟ್ಟಲೆ ಇರುವ ಹೊರಗಿನವರ ಜಮೀನುಗಳ ಲಿಂಕ್ ಪ್ರಕ್ರಿಯೆಗೆ ಹಿನ್ನೆಡೆಯಾಗಿದೆ ಎಂಬ ಮಾತು ಕೇಳಿಬರುತ್ತಿದೆ. ರಾಜ್ಯ ರಾಜಧಾನಿಗೆ ಅಂಟಿಕೊಂಡಂತಿರುವ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ದೇವನಹಳ್ಳಿ ವ್ಯಾಪ್ತಿಯಲ್ಲಿನ ರಿಯಲ್ ಎಸ್ಟೇಟ್ ಬೂಮ್‌ನಲ್ಲಿದೆ. ಈ ಭಾಗದಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಭೂಮಿ ಚಿನ್ನದ ಗಣಿಯಾಗಲಿದೆ ಎಂಬ ಲೆಕ್ಕಾಚಾರವಿದೆ ಈ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಹೊರ ಜಿಲ್ಲೆ ಹಾಗೂ ನೆರೆರಾಜ್ಯದ ಕೋಟಿಕುಳಗಳೇ ಇಲ್ಲಿನ ಭೂಮಿಯ ಒಡೆಯರಾಗುತ್ತಿದ್ದಾರೆ.

ತುಂಡು ಭೂಮಿ, ವ್ಯಾಜ್ಯ: ಇನ್ನೂ ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ 1ರಿಂದ ನಾಲ್ಕೈದು ಗುಂಟೆ ಜಮೀನುಗಳ ಪಹಣಿಗಳಿಗೆ ಹಲವು ಮಾಲೀಕರಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ಜಂಟಿ ಖಾತೆಗಳಿವೆ, ಬಹುತೇಕ ಪ್ರಕರಣಗಳ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿವೆ ಇವೆಲ್ಲ ಕಾರಣಗಳಿಂದ ಜಿಲ್ಲೆಯಲ್ಲಿ ಪಹಣಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಶೇ.100 ಗುರಿ ಸಾಧನೆ ಕಷ್ಟಸಾಧ್ಯವಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಜಿಲ್ಲೆಯಲ್ಲಿ ಅಭಿಯಾನ: ನನ್ನ ಆಧಾರ್‌ನೊಂದಿಗೆ ನ್ನ ಆಸ್ತಿ ಸುಭದ್ರ ೋಷವಾಕ್ಯದೊಂದಿಗೆ ಪಹಣಿಗೆ ಆಧಾರ್‌ಸಂಖ್ಯೆ ಜೋಡಿಸುವ ಯೋಜನೆಗೆ ಆರಂಭದಲ್ಲಿ ರೈತಾಪಿವಲಯದಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ಜಿಲ್ಲೆಯಲ್ಲಿ ಅಭಿಯಾನದ ರೂಪದಲ್ಲಿ ಇಲಾಖೆ ಪ್ರಕ್ರಿಯೆ ಆರಂಭಿಸಿತ್ತು. ಜಿಲ್ಲಾಧಿಕಾರಿಗಳು ವಿಶೇಷ ಆಸಕ್ತಿ ತೋರಿಸಿ ಈ ಅಭಿಯಾನಕ್ಕೆ ಒತ್ತು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾಧನೆಯಲ್ಲಿ ಜಿಲ್ಲೆ ರಾಜ್ಯದ ಜಿಲ್ಲೆಗಳ ಪೈಕಿ 22 ನೇಸ್ಥಾನದಲ್ಲಿದೆ.

ಕೃಷಿ ಭೂಮಿ ದಾಖಲೆಗೆ ಆಧಾರ್‌ಲಿಂಕ್ ಮಾಡುವುದರಿಂದ ರೈತರಿಗೆ ಬರ ಪರಿಹಾರ ವಿತರಿಸಲು ಹೆಚ್ಚು ಅನುಕೂಲವಾಗುತ್ತದೆ, ತ್ವರಿತವಾಗಿ ಪರಿಹಾರ ವಿತರಿಸಲು ಸುಲಭವಾಗುತ್ತದೆ, ಜತೆಗೆ ಸರ್ಕಾರದ ಯಾವುದೇ ಯೋಜನೆಯ ಲ ಪಡೆಯಲು ಪದೆ ಪದೇ ದಾಖಲೆ ಸಲ್ಲಿಸುವ ಅಗತ್ಯ ಬರುವುದಿಲ್ಲ. ಆದ್ದರಿಂದ ಜಿಲ್ಲೆಯ ಜನರು ಪಹಣಿಗೆ ಆಧಾರ್ ಸಂಖ್ಯೆ ಜೋಡಿಸುವ ಪ್ರಕ್ರಿಯೆಗೆ ಲಾಭಪಡೆಯಬೇಕು.

ಎಚ್.ಅಮರೇಶ್, ಅಪರ ಜಿಲ್ಲಾಧಿಕಾರಿ, ಬೆಂ.ಗ್ರಾಮಾಂತರ

ಅಭಿಯಾನದ ಮಾದರಿಯಲ್ಲಿ ಜಿಲ್ಯಾದ್ಯಂತ ಪಹಣಿಗೆ ಆಧಾರ್‌ಲಿಂಕ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ, ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ವಲಯಕ್ಕೆ ಈ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಕೆಲವು ಕಡೆಗಳಲ್ಲಿ ಜಮೀನು ಮಾಲೀಕರೇ ನಿರಾಸಕ್ತಿ ತೋರಿಸುತ್ತಿದ್ದಾರೆ. ಹಲವು ಕಡೆಗಳಲ್ಲಿ ಮಾಲೀಕರನ್ನು ಸಂಪರ್ಕಿಸುವುದೇ ಕಷ್ಟ ಸಾಧ್ಯ ಎಂಬಂತಾಗಿದೆ. ಆದರೂ ಇದುವರೆಗೆ ಜಿಲ್ಲೆಯಲ್ಲಿ ಶೇ.34 ಸಾಧನೆ ಮಾಡಲಾಗಿದೆ.
ನಾಗರಾಜ್, ಜಿಲ್ಲಾ ಭೂಮಿ ಸಂಯೋಜಕರು, ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net