

ಆಧಾರ್ ನೋಂದಣಿ, ತಿದ್ದುಪಡಿಗೆ ಅಂಗವಿಕಲರಿಗೆ ಹಾಗೂ ವಯೋವೃದ್ಧರಿಗೆ ವಾಸಸ್ಥಳದಲ್ಲೇ ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂಬ ಸರ್ಕಾರದ ಸುತ್ತೋಲೆಯಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಕಚೇರಿಗೆ ಕರೆಸಿಕೊಂಡು ಅಲೆದಾಡಿಸಲಾಗುತ್ತಿದೆ. ಜನಜಾಗೃತಿ ಮೂಡಿಸಬೇಕಾದ ವ್ಯವಸ್ಥೆ ಮೌನಕ್ಕೆ ಶರಣಾಗಿರುವುದರಿಂದ ಫಲಾನುಭವಿಗಳು ಸರ್ಕಾರದ ಸವಲತ್ತು ಪಡೆದುಕೊಳ್ಳಲು ನರಕಯಾತನೆ ಅನುಭವಿಸುವಂತಾಗುತ್ತಿದೆ.
ಎಂಡೋಪೀಡಿತೆ ಪುತ್ತೂರು ಕುಂಬ್ರ ಮೂಲದ ಅಕ್ಷತಾ ಆರ್.ಜಿ. ಅವರ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆಯಾದ ಹಿನ್ನೆಲೆಯಲ್ಲಿ ಬ್ಯಾಂಕ್ ಅಽಕಾರಿಗಳು ಆಧಾರ್ ದೃಢೀಕರಣ ಪ್ರಮಾಣಪತ್ರ ತರುವಂತೆ ಸೂಚಿಸಿದ್ದರು. ಹಾಗಾಗಿ ಪುತ್ತೂರು ಪ್ರಧಾನ ಅಂಚೆಕಚೇರಿಯಲ್ಲಿ ವಿಚಾರಿಸಿದ ಸಂದರ್ಭ ಎಂಡೋ ಪೀಡಿತೆಯನ್ನು ಕಚೇರಿಗೆ ಕರೆದುಕೊಂಡು ಬರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅಕ್ಷತಾ ಅವರ ತಾಯಿ ರಾಧಾ ಪೂಜಾರಿ ಪುತ್ರಿಯನ್ನು ಅಂಚೆ ಕಚೇರಿ ಹಾಗೂ ಬ್ಯಾಂಕ್ ಕಚೇರಿಗೆ ಎರಡರಿಂದ ಮೂರು ಬಾರಿ ಕರೆದುಕೊಂಡು ಬಂದಿದ್ದಾರೆ.
ವಾಸಸ್ಥಳದಲ್ಲೇ ಮಾಹಿತಿಗೆ ಸೂಚನೆ:
ಅಂಗವಿಕಲತೆ ಅಥವಾ ಇತರೆ ಯಾವುದೇ ಕಾರಣದಿಂದ ಕುಟುಂಬ ಸದಸ್ಯರಿಗೆ ಬಯೋಮೆಟ್ರಿಕ್ ನೋಂದಣಿಗೆ ಕಚೇರಿಗೆ ತೆರಳಲಾಗದಿದ್ದರೆ, ಅವರ ವಾಸಸ್ಥಳದಲ್ಲೇ ಮಾಹಿತಿ ಪಡೆದುಕೊಳ್ಳಲು ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ಗೆ ಬಯೋಮೆಟ್ರಿಕ್ ನೋಂದಣಿ ವಿಚಾರದಲ್ಲಿ ಸರ್ಕಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಸಂಬಂಧಪಟ್ಟ ಅಽಕಾರಿಗಳು ತಮ್ಮ ಅನುಕೂಲಕ್ಕಾಗಿ ಕಚೇರಿಗೆ ಕರೆಸಿಕೊಳ್ಳುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಮಾಸಾಶನಕ್ಕೂ ಅಡ್ಡಿ:
ಪುತ್ತೂರು ಕುಂಬ್ರ ನಿವಾಸಿ ಅಕ್ಷತಾ ಆರ್.ಜಿ. ಎಂಡೋಪೀಡಿತರಾಗಿದ್ದು, ಮಲಗಿದಲ್ಲೇ ಇದ್ದಾರೆ. ಆಧಾರ್ ಅವ್ಯವಸ್ಥೆಯಿಂದ ಅವರಿಗೆ ಡಿಸೆಂಬರ್ ಹಾಗೂ ಜನವರಿ ತಿಂಗಳ ಮಾಸಾಶನ ದೊರೆತಿಲ್ಲ. ಅದನ್ನು ವಾಸಸ್ಥಳದಲ್ಲೇ ಸರಿಪಡಿಸಿಕೊಡಬೇಕಾದ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದಿರುವುದರಿಂದ ಅವರನ್ನು ದೂರದ ಪುತ್ತೂರಿಗೆ ಅಲೆದಾಡಿಸಬೇಕಾದ ದುಸ್ಥಿತಿ ಎದುರಾಗಿದೆ.
ಆದೇಶ ಉಲ್ಲಂಘನೆ:
ಬ್ಯಾಂಕ್ ಅಽಕಾರಿಗಳು ವಯೋವೃದ್ಧರ ಹಾಗೂ ಅಂಗವಿಕಲರ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆ ಕಲ್ಪಿಸಬೇಕೆಂಬ ನಿಯಮವಿದೆ. ಆದರೆ ಕಚೇರಿಗೆ ಬರಲು ಅಶಕ್ತರಾದವರ ಬಳಿಗೆ ತೆರಳಿ ಸೇವೆ ನೀಡುವ ಬದಲು ತಾವಿದ್ದಲ್ಲಿಗೇ ಕರೆಸಿಕೊಳ್ಳಲಾಗುತ್ತಿದೆ. ಪಿಂಚಣಿ ಪ್ರಕರಣವೊಂದರಲ್ಲಿ ಬ್ಯಾಂಕ್ ಅಧಿಕಾರಿಗಳು ಪಿಂಚಣಿದಾರರ ಮನೆಗೆ ಹೋಗಿ ಕಾರಣ ತಿಳಿದುಕೊಳ್ಳಬೇಕೆಂದು ಹೇಳಿದ್ದಲ್ಲದೇ ಕಾರಣ ತಿಳಿಯದೆ ಪಿಂಚಣಿ ನಿಲ್ಲಿಸಿದ್ದಕ್ಕೆ ೧ ಲಕ್ಷ ರೂ. ದಂಡವನ್ನು ಹೈಕೋರ್ಟ್ ವಿಧಿಸಿದೆ.
ಗಾಲಿಕುರ್ಚಿ ವ್ಯವಸ್ಥೆಯಿಲ್ಲ
ಪುತ್ತೂರು ಪ್ರಧಾನ ಅಂಚೆ ಕಚೇರಿಯ ಮೇಲಂತಸ್ತಿಗೆ ಅಂಗವಿಕಲರು ಹಾಗೂ ವಯೋವೃದ್ಧರಿಗೆ ತೆರಳಲು ಗಾಲಿಕುರ್ಚಿ ವ್ಯವಸ್ಥೆಯಿಲ್ಲ. ಆಧಾರ್ ಸೇರ್ಪಡೆ ಹಾಗೂ ತಿದ್ದುಪಡಿ ಸೇರಿ ಅಗತ್ಯ ವ್ಯವಸ್ಥೆಗಳಿಗೆ ಜನರನ್ನು ಕಚೇರಿಗೇ ಕರೆಸಿಕೊಳ್ಳುವ ಅಂಚೆಕಚೇರಿ ಅಽಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಚುನಾವಣೆ ಸಮಯದಲ್ಲಿ ಅಂಗವಿಕಲರು ಹಾಗೂ ವಯೋವೃದ್ಧರ ಮನೆಗೆ ಹೋಗಿ ಮುಂಚಿತವಾಗಿಯೇ ಮತದಾನ ಮಾಡಿಸಲು ಕಾನೂನಿನಲ್ಲಿ ಅವಕಾಶಗಳಿದೆ. ಆದರೆ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿ ಆಧಾರ್ ಮಾಹಿತಿ ಸೇರ್ಪಡೆ ವಿಚಾರದಲ್ಲಿ ಅವರನ್ನು ಕಚೇರಿಗೆ ಕರೆಸಿಕೊಳ್ಳುತ್ತಿರುವುದು ಅಕ್ಷಮ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ.
| ಸಂಜೀವ ಕಬಕ, ಅಧ್ಯಕ್ಷ, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ, ದ.ಕ.
ಎಂಡೋಪೀಡಿತ ಯುವತಿಯನ್ನು ಆಧಾರ್ ತಿದ್ದುಪಡಿಗೆ ಕಚೇರಿಗೆ ಕರೆಸಿದ ವಿಚಾರದಲ್ಲಿ ತಿಳಿವಳಿಕೆ ಪತ್ರ ನೀಡಲಾಗುವುದು. ಮುಂದೆ ಇಂತಹ ಪ್ರಕರಣ ನಡೆದಲ್ಲಿ ಶೋಕಾಸ್ ನೋಟೀಸ್ ನೀಡಿ ಹಿರಿಯ ಅಽಕಾರಿಗಳನ್ನು ಕರೆಸಲಾಗುವುದು. ಎಲ್ಲ ಬ್ಯಾಂಕ್‌ಗಳಿಗೆ ಪತ್ರ ಬರೆದು ಮುಂದೆ ಇಂತಹ ಪ್ರಕರಣ ನಡೆಯದಂತೆ ಎಚ್ಚರ ವಹಿಸಲಾಗುವುದು.
| ಜುಬಿನ್ ಮೊಹಾಪಾತ್ರ, ಸಹಾಯಕ ಆಯುಕ್ತ, ಪುತ್ತೂರು