ಆಧಾರ್​ ಕಾರ್ಡ್​ಗೆ ಮೊಬೈಲ್​ ಸಂಖ್ಯೆ ಜೋಡಣೆ ಕಡ್ಡಾಯ

udp-17-adhar
Published on

ಉಡುಪಿ: ಜಿಲ್ಲೆಯಲ್ಲಿ ಆಧಾರ್​ ಕಾರ್ಡ್​ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಮೊಬೈಲ್​ ಸಂಖ್ಯೆಯನ್ನು ಆಧಾರ್​ಗೆ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾರ್ನ್ಪರೆನ್ಸ್​ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಧಾರ್​ ಮಾನಿಟರಿಂಗ್​ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈವರೆಗೆ 14,11,209 ಜನರು ಆಧಾರ್​ ಕಾರ್ಡ್​ ಅನ್ನು ಹೊಂದಿದ್ದು, ಅವರಲ್ಲಿ 13,42,275 ಜನರು ಮೊಬೈಲ್​ ಸಂಖ್ಯೆಯನ್ನು ನೋಂದಾಯಿಸಿಕೊಂಡಿದ್ದಾರೆ. ಶೇ. 68.93 ರಷ್ಟು ಪ್ರಗತಿಯಾಗಿದ್ದು, ಬಾಕಿ ಉಳಿದ ಪ್ರತಿಯೊಬ್ಬರೂ ಆಧಾರ್​ ಕಾರ್ಡ್​ಗೆ ಮೊಬೈಲ್​ ಸಂಖ್ಯೆಯನ್ನು ಶೀಘ್ರದಲ್ಲಿಯೇ ಅಪ್​ಡೇಟ್​ ಮಾಡಿಸಿಕೊಳ್ಳಬೇಕು ಎಂದರು.

ಆಧಾರ್​ ಕಾರ್ಡ್​ ಮಾಡಿಸಿ 15 ವರ್ಷ ಮೇಲ್ಪಟ್ಟವರು ಆಧಾರ್​ ಸೆಂಟರ್​ಗಳಿಗೆ ತೆರಳಿ ತಮ್ಮ ಬೆರಳಚ್ಚು ನೀಡಿ, ಆಧಾರ್​ ಕಾರ್ಡ್​ಗಳನ್ನು ಸಕ್ರಿಯಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆಧಾರ್​ ನಿಷ್ಕ್ರಿಯಗೊಳ್ಳಲಿದೆ. ಪ್ರಸ್ತುತ 41,115 ಯುವಜನರು ಬಯೋಮೆಟ್ರಿಕ್​ ನೀಡುವುದು ಬಾಕಿ ಇದೆ. ಇದರಿಂದ ಭವಿಷ್ಯದಲ್ಲಿ ಯಾವುದೇ ಪರೀಕ್ಷೆ ಬರೆಯಲು ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ಬಯೋಮೆಟ್ರಿಕ್​ ನೀಡಿ, ಅಪ್​ಡೇಟ್​ ಮಾಡಿಸಿಕೊಳ್ಳಬೇಕೆಂದರು.

11,947 ಮಕ್ಕಳಿಗೆ ಆಧಾರ್​ ಇಲ್ಲ

ಅಂಗನವಾಡಿ ಕೇಂದ್ರಗಳಿಗೆ ಪೋಷಣ್​ ಟ್ರಾ$್ಯಕರ್​ನಲ್ಲಿ 45,832 ಮಕ್ಕಳು ದಾಖಲಾಗಿದ್ದು, ಅವರಲ್ಲಿ 33,425 ಮಕ್ಕಳು ಆಧಾರ್​ ಕಾರ್ಡ್​ ಹೊಂದಿದ್ದಾರೆ. ಬಾಕಿ ಉಳಿದ 11,947 ಮಕ್ಕಳಿಗೂ ಆಧಾರ್​ ಕಾರ್ಡ್​ ಮಾಡಿಸುವುದು ಅವಶ್ಯ. ಪೋಷಕರು ಹತ್ತಿರದ ಅಂಚೆ ಕಚೇರಿಗಳಲ್ಲಿ ಆಧಾರ್​ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದರು. ಜನನ ಪ್ರಮಾಣ ಪತ್ರ ಹಾಗೂ ಶಾಲೆಯ ದಾಖಲೆಗಳಲ್ಲಿ ಹೆಸರು ಬದಲಾವಣೆ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಆಧಾರ್​ ಕಾರ್ಡ್​ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯು.ಐ.ಡಿ.ಎ.ಐ ಉಪನಿರ್ದೇಶಕ ಗುಲ್ಷನ್​ ಕುಮಾರ್​ ಸಿಂಗ್​, ಅಸಿಸ್ಟೆಂಟ್​ ಮ್ಯಾನೆಜರ್​ ಮೊಹಮ್ಮದ್​ ಮೂಸಾಬ್​ ವಿಡಿಯೋ ಕಾನ್ಫ್​ರೆನ್ಸ್​ ಮೂಲಕ ಭಾಗವಹಿಸಿದ್ದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸುಧಾಕರ್​ ನಾಯಕ್​, ಡಿಡಿಪಿಐ ಮಾರುತಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ., ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ ಮತ್ತಿತರರು ಉಪಸ್ಥಿತರಿದ್ದರು.

ಹೊರರಾಜ್ಯ ಹಾಗೂ ವಿದೇಶಗಳಿಂದ ಬಂದಿರುವ ಜನರು ಸಹ ಸುಳ್ಳು ದಾಖಲೆ ಪತ್ರಗಳನ್ನು ನೀಡಿ ಆಧಾರ್​ ನೋಂದಣಿಗೆ ಮುಂದಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಎಚ್ಚರ ವಹಿಸಬೇಕು. ಅಧಿಕಾರಿಗಳು ಅರ್ಜಿಗಳೊಂದಿಗೆ ಲಗತ್ತಿಸುವ ಆಧಾರ್​ ಕಾರ್ಡ್​ನ ನೈಜತೆಯನ್ನು ಪರಿಶೀಲಿಸಬೇಕು. ಸುಳ್ಳು ದಾಖಲೆಗಳನ್ನು ನೀಡಿ ಆಧಾರ್​ ಕಾರ್ಡ್​ ಪಡೆಯಲು ಬರುವವರು ಹಾಗೂ ನಕಲಿ ಆಧಾರ್​ ಕಾರ್ಡ್​ಗಳನ್ನು ಹೊಂದಿದವರ ವಿರುದ್ಧ ಪೊಲೀಸ್​ ಇಲಾಖೆಯು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಸ್ವರೂಪಾ ಟಿ.ಕೆ., ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net