

ಚಾಮರಾಜನಗರ: ಜಿಲ್ಲೆಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗಿರುವ ಎಲ್ಲ ಮತದಾರರಿಂದ ನಮೂನೆ 6ಬಿ ರಲ್ಲಿ ಆಧಾರ್ ಸಂಖ್ಯೆಯನ್ನು ಪಡೆದು ಮತದಾರರ ಪಟ್ಟಿಯಲ್ಲಿ ಆಧಾರ್ ಡೇಟಾವನ್ನು ಲಿಂಕ್ ಮಾಡಲಾಗುತ್ತದೆ ಎಂದು ಜಿಲ್ಲಾಕಾರಿ ಚಾರುಲತಾ ಸೋಮಲ್ ಹೇಳಿದರು.
ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಭಾರತ ಚುನಾವಣಾ ಆಯೋಗದ ಮಹತ್ತರ ಕಾರ್ಯಕ್ರಮವಾದ ಮತದಾರರ ಗುರುತಿಗೆ ಆಧಾರ್ ಸಂಖ್ಯೆ ಜೋಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನಿಂದ ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ. ಮತದಾರರು ಸ್ವತಃ ತಾವೇ, ಆನ್‌ಲೈನ್ ಮೂಲಕ ತಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ನಂಬರ್ ಅನ್ನು (ಎನ್‌ವಿಎಸ್‌ಪಿ)ಪೋರ್ಟಲ್ ಅಥವಾ ವೋಟರ್ ಹೆಲ್ಪ್‌ಲೈನ್ ಆಪ್ ಮೂಲಕ ಲಿಂಕ್ ಮಾಡಿಕೊಂಡು ಸಹ ದೃಢೀಕರಿಸಿಕೊಳ್ಳಬಹುದಾಗಿದೆ ಎಂದರು. ಚುನಾವಣಾ ತಹಸೀಲ್ದಾರ್ ವಿನೋದಾ, ಮುಖಂಡರಾದ ಬ್ಯಾಡಮೂಡ್ಲು ಬಸವಣ್ಣ, ಎಂ.ಸ್ವಾಮಿ, ಮಹೇಶ್ ಇತರರು ಇದ್ದರು.