ಅಲ್ಪಸಂಖ್ಯಾತರ ನಿಯೋಗದಿಂದ ಸಿಎಂ ಭೇಟಿ: ಶಾಂತಿ, ಸೌಹಾರ್ದತೆ ನಿರೀಕ್ಷೆ ಕಾಪಾಡಲು ಸಿಎಂಗೆ ಮನವಿ

UT Khader
Published on

ಬೆಂಗಳೂರು: ಆಜಾನ್ ಈಗ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಕೆಲವು ಕಡೆ ಆಜಾನ್ ಗೆ ಪ್ರತಿಯಾಗಿ ಭಜನೆ ಮೊಳಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ನಿಯೋಗ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದೆ.

ಸಿಎಂ ಭೇಟಿ ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಯು. ಟಿ.ಖಾದರ್, ರಾಜ್ಯದಲ್ಲಿ ಬಹುತೇಕ ಎಲ್ಲ ಜನರು ಶಾಂತಿ ಸೌಹಾರ್ದತೆ ನಿರೀಕ್ಷೆ ಮಾಡುತ್ತಿದ್ದಾರೆ. ಕೆಲವೊಂದು ಶಕ್ತಿ ಗಳು ಕೆಲ ವಿಷಯ ಮುಂದಿಟ್ಟುಕೊಂಡು ಅಶಾಂತಿ ಉಂಟು ಮಾಡಲು ಯತ್ನ ಮಾಡುತ್ತಿವೆ.

ಸರ್ಕಾರ ಶಾಂತಿಯುತ ವಾತಾವರಣ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಸಿಎಂ ಜತೆ ಚರ್ಚೆ ಮಾಡಿದ್ದೇವೆ ಎಂದರು. ಸಿಎಂ ಕೂಡ ಎಲ್ಲ ರೀತಿಯ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ. ನಮಗೆ ರಾಜ್ಯದಲ್ಲಿ ಶಾಂತಿ ಸಾಮರಸ್ಯ, ಸೋದರತೆ‌ ನೆಲೆಸಬೇಕು. ಇದಕ್ಕೆ ಸರ್ಕಾರ ಕ್ರಮ ತಗೋಬೇಕು ಎಂದು ಆಗ್ರಹಿಸಿದರು. ಆಜಾನ್ ಬಗ್ಗೆ ಗೃಹ ಸಚಿವರು ಎಲ್ಲಿಯೂ ಹೇಳಿಲ್ಲ. ಆದರೆ ಶಬ್ದ ಮಾಲಿನ್ಯದ ಬಗ್ಗೆ ಕೋರ್ಟ್ ಆದೇಶದಂತೆ ಸರ್ಕಾರದ ನಿಯಮ ರೂಪಿಸಲಿದೆ. ಅದರಂತೆ ಎಲ್ಲರು ಕೂಡ ಪಾಲನೆ ಮಾಡಬೇಕು ಎಂದರು.

ಕೆಲವೊಂದು ಕೋಮು ಶಕ್ತಿ ಗಳಿಂದ ಸಾಮರಸ್ಯ ಕದಡುವ ಪ್ರಯತ್ನ ನಡೆಯುತ್ತಿದೆ. ಆದರೆ ನಮಗೆ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಮುಖ್ಯ. ಇದನ್ನು ಮಾಡುವಂತೆ ಸಿಎಂ ಗೆ ಮನವಿ ಮಾಡಿದ್ದೇವೆ. ಯಾವುದೇ ಸಂಘ ಸಂಸ್ಥೆಗಳು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಕೊಡಬಾರದು ಎಂದು ಸಿಎಂ ಗಮಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ ದ್ವೇಷದ ಮೆಸೇಜ್ ಹರಿಬಿಡುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದ್ದೇವೆ. ಎಲ್ಲ ಶಬ್ದ ಮಾಲಿನ್ಯ ಸಂಬಂಧ ಸರ್ಕಾರ ನಿಯಮ ಮಾಡಲಿ. ಆದರೆ ಅಂತಿಮವಾಗಿ ಸರ್ಕಾರದ ಆದೇಶವನ್ನು ಎಲ್ಲರು ಪಾಲಿಸಬೇಕು. ಕೋರ್ಟ್ ಆದೇಶದಂತೆ ಶಬ್ದ ಮಾಲಿನ್ಯದ ಬಗ್ಗೆ ನಿಯಮ ರೂಪಿಸಲಿ. ಆ ನಂತರ ಎಲ್ಲರು ಅದನ್ನು ಪಾಲಿಸುತ್ತಾರೆ. ಆದರೆ ಈ ನಿಯಮದಿಂದ ನಮ್ಮಲ್ಲಿ ಯಾವುದೇ ಲೋಪಗಳು ಆಗುತ್ತಿಲ್ಲ ಎಂದು ಹೇಳಿದರು.

ಇಂತಹ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಬೆನ್ನಿ ನಿಂತಿದೆಯೇ ಎಂಬ ಪ್ರಶ್ನೆಗೆ, ಈ ವಿಷಯದಲ್ಲಿ ಪಕ್ಷವನ್ನು ಮಧ್ಯಕ್ಕೆ ತರಬೇಡಿ. ಇದರಲ್ಲಿ ಯಾವುದೇ ಪಕ್ಷ, ಜಾತಿ ಇಲ್ಲ. ಇದರಲ್ಲಿ ಬರೀ ಶಬ್ದ ಮಾಲಿನ್ಯ ಮಾತ್ರ. ಶಬ್ದ ಮಾಲಿನ್ಯಕ್ಕೂ ಜಾತಿ ಪಕ್ಷ ತಂದ್ರೆ ವಿಷಯ ಎಲ್ಲಿಗೆ ಹೋಗಬೇಕು..? ಎಂದು ಖಾದರ್ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net