ಎಡಿಜಿಪಿ ಭೇಟಿ ನೀಡಿ ಪರಿಶೀಲನೆ

h22-ADGP 2
Published on

ಹುಬ್ಬಳ್ಳಿ: ಬಾಲಕಿ ಕೊಲೆ ಹಾಗೂ ಪೊಲೀಸರ ಗುಂಡೇಟಿಗೆ ಬಲಿಯಾದ ರಿತೇಶಕುಮಾರ್ ಪ್ರಕರಣದ ಎರಡೂ ತನಿಖೆಯನ್ನು ಸಿಐಡಿ ವಹಿಸಿಕೊಂಡ ಹಿನ್ನೆಲೆಯಲ್ಲಿ ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ಅವರು ಮಂಗಳವಾರ ನಗರಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಾಲಕಿ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ ಎಸ್‌ಪಿ ವೆಂಕಟೇಶ ನೇತೃತ್ವದ ತಂಡ ನಡೆಸುತ್ತಿತ್ತು. ಎಸಿಪಿ ಶಿವಪ್ರಕಾಶ ನಾಯ್ಕ ಅವರಿಂದ ಎರಡೂ ಪ್ರಕರಣಗಳ ಸಂಪೂರ್ಣ ಮಾಹಿತಿ ಪಡೆದ ಎಡಿಜಿಪಿ, ಕೆಲವು ದಾಖಲೆಗಳನ್ನು ಪರಿಶೀಲಿಸಿದರು. ಸಿಐಡಿಗೆ ಹಸ್ತಾಂತರವಾದ ದಾಖಲನೆ ಪರಿಶೀಲಿಸಿ, ತನಿಖಾ ತಂಡಕ್ಕೆ ಅಗತ್ಯ ಸಲಹೆ ಸೂಚನೆ ನೀಡಿದರು.

ಬಾಲಕಿ ಹತ್ಯೆ ಹಾಗೂ ಆರೋಪಿ ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿದ ಎಡಿಜಿಪಿ ಸಿಂಗ್, ಸ್ಥಳೀಯ ಪೊಲೀಸರಿಂದ ಅಗತ್ಯ ಮಾಹಿತಿ ಪಡೆದರು. ಆರೋಪಿ ಬಾಲಕಿಯ ಚಲನವಲನ ಗಮನಿಸುತ್ತಿದ್ದಿರಬಹುದು. ಈ ಹಿಂದೆ ಅವನು ಈ ಸ್ಥಳಕ್ಕೆ ಅಥವಾ ಸುತ್ತಮುತ್ತ ಎಲ್ಲಿಯಾದರೂ ಓಡಾಡಿರಬಹುದು. ಆಯಾ ಭಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಪರಿಶೀಲಿಸಿ ಮಾಹಿತಿ ಸಂಗ್ರಹಿಸಬೇಕು ಎಂದು ಸಲಹೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ ಕೊಲೆಯಾದ ಸ್ಥಳವನ್ನೂ ಸೂಕ್ಷ್ಮವಾಗಿ ಗಮನಿಸಿದ ಎಡಿಜಿಪಿ, ಗುಂಡು ಹೊಡೆಯಲು ಕಾರಣವೇನು? ಎನ್ನುವ ಮಾಹಿತಿ ಪಡೆದುದಲ್ಲದೆ, ಸ್ಥಳ ಮಹಜರು ನಡೆಸಿದಾಗ ಸಂಗ್ರಹಿಸಿದ ಸಾಕ್ಷ್ಯಾಧಾರ ಪರೀಕ್ಷಿಸಿದರು. ಬಾಲಕಿ ಮನೆಗೆ ಭೇಟಿ ನೀಡಿ ತಾಯಿಯಿಂದ ಕೆಲ ಮಾಹಿತಿ ಸಂಗ್ರಹಿಸಿದರು. ಕೆಎಂಸಿಆರ್‌ಐ ಆಸ್ಪತ್ರೆಗೆ ಭೇಟಿ ನೀಡಿ, ಆರೋಪಿಯ ಶವ ಪರಿಶೀಲಿಸಿದರು ಎಂದು ಹೇಳಲಾಗುತ್ತಿದೆ.

ಕುಟುಂಬಸ್ಥರು ಪತ್ತೆಯಿಲ್ಲ: ಪೊಲೀಸರ ಗುಂಡೇಟಿಗೆ ಬಲಿಯಾದ ಆರೋಪಿ ರಿತೇಶಕುಮಾರ್ ಶವ, ವಾರಸುದಾರರಿಲ್ಲದ್ದರಿಂದ ಕೆಎಂಸಿಆರ್‌ಐ ಶವಾಗಾರದಲ್ಲಿದೆ. ಬಿಹಾರಕ್ಕೆ ತೆರಳಿರುವ ಪೊಲೀಸ್ ತಂಡ ಇನ್ನೂ ಶೋಧ ಕಾರ್ಯ ನಡೆಸುತ್ತಿದೆ. ಮರಣೋತ್ತರ ಪರೀಕ್ಷೆ ನಡೆದು 10 ದಿನ ಕಳೆದರೂ ಆರೋಪಿಯ ಪರಿಚಯಸ್ಥರು, ಕುಟುಂಬದವರು ಇನ್ನೂ ಪತ್ತೆಯಾಗಿಲ್ಲ. ಫೀಜರ್‌ನಲ್ಲಿಯೂ 12 ದನಕ್ಕಿಂತ ಹೆಚ್ಚು ದಿನ ಶವ ಇಟ್ಟುಕೊಳ್ಳಲು ಸಾಧ್ಯವಾಗದ ಕಾರಣ, ಕೋರ್ಟ್ ಸೂಚನೆ ಮೇರೆಗೆ ಅಂತ್ಯಸಂಸ್ಕಾರಕ್ಕೆ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net