

ಚಿಕ್ಕಬಳ್ಳಾಪುರ: ಮುಂಗಾರು ಪೂರ್ವ ಅಗತ್ಯ ಸಿದ್ಧತೆಗಳ ಜತೆಗೆ ಸಮರ್ಪಕ ಬರ ನಿರ್ವಹಣೆ ಪ್ರಕ್ರಿಯೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಮೇ ಆರಂಭದಿಂದಲೇ ಮಳೆ ಉತ್ತಮವಾಗಿ ಬಿದ್ದಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಇದಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಮುಂಗಾರು ಪೂರ್ವ ಸಿದ್ಧತಾ ಕಾರ್ಯಗಳನ್ನು ನಿರ್ವಹಿಸಲು ಖಡಕ್ ಸೂಚನೆ ನೀಡಲಾಗಿದೆ.
* 55 ಕೋಟಿ ಪರಿಹಾರ ಪಾವತಿ
ರಾಷ್ಟ್ರೀಯ ವಿಪತ್ತು ನಿರ್ವಹಣೆಯ ನಿಯಮಗಳನ್ವಯ 2023-24 ನೇ ಸಾಲಿನಲ್ಲಿ 9ನೇ ಹಂತದವರೆಗೆ 177069155 ರೂ ಬರ ಪರಿಹಾರವನ್ನು ಜಿಲ್ಲೆಯ 97,278 ರೈತರಿಗೆ ನೀಡಲಾಗಿದೆ.
ಇತ್ತೀಚೆಗೆ 10 ನೇ ಹಂತದಲ್ಲಿ 373326422 ರೂಗಳನ್ನು ರೈತರ ಖಾತೆಗೆ ಡಿ.ಬಿ.ಟಿ ಮೂಲಕ ವರ್ಗಾಯಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 97 ಸಾವಿರಕ್ಕೂ ಹೆಚ್ಚು ಜಿಲ್ಲೆಯ ರೈತರಿಗೆ 550395577 ರೂ ಪಾವತಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
*ಬಿತ್ತನೆ ಬೀಜ ವಿತರಣೆ
ಮೇನಲ್ಲಿ ಉತ್ತಮ ಮಳೆಯಿಂದ ರಾಗಿ, ಜೋಳ, ತೊಗರಿ, ಶೇಂಗಾ ಬಿತ್ತನೆ ಬೀಜಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದ್ದು ಈಗಾಗಲೇ ಕೃಷಿ ಇಲಾಖೆಯಿಂದ ಅಗತ್ಯ ಪ್ರಮಾಣದಲ್ಲಿ ದಾಸ್ತಾನಿಟ್ಟುಕೊಂಡಿದ್ದು ವಿತರಣಾ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಯಾವುದೇ ಲೋಪಗಳಿಗೆ ಅವಕಾಶ ನೀಡದಿರಲು ಸೂಚಿಸಲಾಗಿದೆ. ಜಾನುವಾರುಗಳ ಮೇವಿಗೆ ಕೊರತೆ ಉಂಟಾಗದಿರಲು ಇತ್ತೀಚೆಗೆ ೯,೦೦೦ ಮೇವಿನ ಕಿಟ್ ಗಳನ್ನು ವಿತರಿಸಿದ್ದು ಉಳಿಕೆ ಕಿಟ್ ಗಳ ವಿತರಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಲಾಗುತ್ತದೆ.
*ಕುಡಿಯುವ ನೀರಿನ ಸಮಸ್ಯೆ
ಪ್ರಸ್ತುತ ಜಿಲ್ಲೆಯ 66 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಮುಂಬರುವ ದಿನಗಳಲ್ಲಿ 121 ಗ್ರಾಮಗಳಲ್ಲಿ ಸಮಸ್ಯೆ ಉದ್ಬವವಾಗುತ್ತದೆ ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ.
ಜಿಲ್ಲೆಯಲ್ಲಿನ ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯ 29 ವಾರ್ಡ್ ಗಳಲ್ಲಿ 17 ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ಸಮಸ್ಯೆ ತಲೆದೋರಬಹುದಾದ 24 ವಾರ್ಡ್ ಗಳಲ್ಲಿ ನೀರು ಪೂರೈಕೆಗಾಗಿ ಖಾಸಗಿ ಕೊಳವೆ ಬಾವಿಗಳ ಮಾಲೀಕರೋಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
*ಶಿಥಿಲಾವಸ್ಥೆಯ ಕೊಠಡಿಗಳನ್ನು ಗುರ್ತಿಸಿ
ಸುಸ್ಥಿತಿಯಲ್ಲಿಲ್ಲದ ಶಾಲಾ ಕೊಠಡಿಗಳು, ಅಂಗನವಾಡಿ ಕೇಂದ್ರಗಳು, ವಿದ್ಯುತ್ ಕಂಬಗಳನ್ನು ಗುರುತಿಸಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದೆ.
ಶಿಥಿಲಾವಸ್ಥೆಯಲ್ಲಿನ ಶಾಲಾ ಕೊಠಡಿಗಳಲ್ಲಿ ಯಾವುದೇ ಕಾರಣಕ್ಕೂ ಪಾಠ ಪ್ರವಚನಗಳನ್ನು ನಡೆಸಬಾರದು. ಹಾಗೆಯೇ ಅಂಗನವಾಡಿ ಕಟ್ಟಡಗಳ ಸ್ಥಿತಿಗತಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ, ವರದಿ ನೀಡಬೇಕು. ಆಯಾ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಹಳೆ ಮನೆಗಳು, ಮಣ್ಣಿನಿಂದ ನಿರ್ಮಿಸಿರುವ ಮನೆಗಳು, ಕಲ್ಲು ಚಪ್ಪಡಿಗಳಿಂದ ನಿರ್ಮಿಸಿರುವ ಮನೆಗಳನ್ನು ಗುರುತಿಸಬೇಕು. ಸುಸ್ಥಿತಿಯಲ್ಲಿಲ್ಲದ ಮನೆಗಳ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕ್ರಮ ಕೈಗೊಳ್ಳಬೇಕು. ಮಳೆಯಿಂದಾಗಿ ಹಾನಿಗೊಳಗಾಗುವ ವಿದ್ಯುತ್ ಕಂಬಗಳನ್ನು ತುರ್ತಾಗಿ ದುರಸ್ತಿಗೊಳಿಸಬೇಕು. ಸುಸ್ಥಿತಿಯಲ್ಲಿಲ್ಲದ ವಿದ್ಯುತ್ ಕಂಬಗಳನ್ನು ಬದಲಾಯಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.