ಸಂಪನ್ಮೂಲ ಸಮರ್ಪಕ ಸದ್ಬಳಕೆ ಅಗತ್ಯ: ಕೇಂದ್ರದ ಜಂಟಿ ಕೃಷಿ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಂ.ಕಲಿಕಾರ್

gkvk media
Published on

ಬೆಂಗಳೂರು: ಕೃಷಿಯಲ್ಲಿ ಉತ್ಪಾದನೆ ಜತೆಗೆ ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಸದ್ಬಳಕೆ ಮಾಡಿಕೊಂಡಲ್ಲಿ ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದು ಕೇಂದ್ರದ ಕೃಷಿ ಹಾಗೂ ಕೃಷಿ ಕಲ್ಯಾಣ ಸಚಿವಾಲಯದ ಜಂಟಿ ಕೃಷಿ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಂ.ಕಲಿಕಾರ್ ಅಭಿಪ್ರಾಯಪಟ್ಟರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕ್ಯಾಂಪಸ್ ಜಿಕೆವಿಕೆಯಲ್ಲಿ ವಿವಿ ಹಾಗೂ ಹೈದರಾಬಾದ್‌ನ ವಿಸ್ತರಣಾ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಪರಿಣಾಮಕಾರಿ ಕೃಷಿ ತಂತ್ರಜ್ಞಾನದ ವರ್ಗಾವಣೆಗಾಗಿ ಸಾಮಾಜಿಕ ಜಾಲತಾಣಗಳು’ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಜಾಲತಾಣಗಳ ಮೂಲಕ ಕೃಷಿ ತಂತ್ರಜ್ಞಾನಗಳನ್ನು ಹೆಚ್ಚಿನ ಜನರಿಗೆ ತಲುಪಿಸಲು ಹಾಗೂ ವಿಡಿಯೋಗಳನ್ನು ವೀಕ್ಷಿಸಿ ಅರಿತುಕೊಂಡು ಸೂಕ್ತವಾದ ವಿದೇಶಿ ತಾಂತ್ರಿಕತೆಗಳನ್ನು ದೇಶದೆಲ್ಲೆಡೆ ಇರುವ ಪ್ರಗತಿಪರ ರೈತರು ಅಳವಡಿಸಿಕೊಳ್ಳುತ್ತಿದ್ದಾರೆ. ಕೃಷಿ ಕ್ಷೇತ್ರ ಡಿಜಿಟಲ್‌ನತ್ತ ಹೆಜ್ಜೆ ಹಾಕುತ್ತಿರುವ ಇಂತಹ ಕಾಲಘಟ್ಟದಲ್ಲಿ ಸೋಷಿಯಲ್ ಮಿಡಿಯಾ ಕುರಿತು ತರಬೇತಿ ಕಾರ್ಯಾಗಾರಗಲು ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಮಾತನಾಡಿ, ದೇಶದ ಶೇ.55 ಕೃಷಿಕರಿಗೆ ಸಕಾಲದಲ್ಲಿ ತಂತ್ರಜ್ಞಾನ ವರ್ಗಾಯಿಸಲು ಕೃಷಿ ವಿವಿ ಹಾಗೂ ಕೃಷಿ ಇಲಾಖೆಗಳಲ್ಲಿ ಸಿಬ್ಬಂದಿಗೆ ಸಾಧ್ಯವಾಗಿಲ್ಲ. ಕೋವಿಡ್ ನಂತರದ ಬೆಳವಣಿಗೆ ಬಳಿಕ ತಂತ್ರಜ್ಞಾನಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಅಗತ್ಯ ಇದೆ. ವಾಟ್ಸ್‌ಆ್ಯಪ್, ಯೂಟ್ಯೂಬ್ ಹಾಗೂ ಕೃಷಿ ಆ್ಯಪ್‌ಗಳ ಮೂಲಕ ನೂತನ ತಾಂತ್ರಿಕತೆಗಳನ್ನು ಕೃಷಿಕರಿಗೆ ಕಡಿಮೆ ಸಮಯದಲ್ಲಿ ತಲುಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಶಿವಕುಮಾರ್, ವಿವಿಯ ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್.ಮಧುಪ್ರಸಾದ್, ಹೈದರಾಬಾದ್‌ನ ವಿಸ್ತರಣಾ ಸಂಸ್ಥೆಯ ಪ್ರಾಧ್ಯಾಪಕ ಡಾ. ಕೆ.ಮಧುಬಾಬು ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net