

ಚಿಕ್ಕೋಡಿ : ಪಟ್ಟಣದ ಬಸವಪ್ರಭು ಕೋರೆ ಪದವಿ ಪೂರ್ವ ಮಹಾವಿದ್ಯಾಲಯದ ಶಿಸ್ತು, ಆತ್ಮೀಯತೆ ಹಾಗೂ ಶೈಕ್ಷಣಿಕ ವಾತಾವರಣ ನನ್ನ ಸಾಧನೆಗೆ ಸಹಕಾರಿಯಾಗಿದೆ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 670ನೇ ರ‌್ಯಾಂಕ್ ಗಳಿಸಿದ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಪ್ರಿಯಾಂಕಾ ಕಾಂಬಳೆ ಹೇಳಿದ್ದಾರೆ.
ಪಟ್ಟಣದ ಬಸವಪ್ರಭು ಕೋರೆ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸತತ ಪ್ರಯತ್ನದಿಂದ ಅಧ್ಯಯನ ಮಾಡಿದರೆ ಬಡ ಕುಟುಂಬದ, ಗ್ರಾಮೀಣ ಪ್ರದೇಶದವರು ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ನಾನೇ ಸಾಕ್ಷಿ ಎಂದರು.
ಕಾಲೇಜಿನ ಪ್ರಾಚಾರ್ಯ ರಾಜೇಶ ನಾಯಕ ಮಾತನಾಡಿ, ನಮ್ಮ ಕಾಲೇಜಿನಲ್ಲಿ 2012-13ರಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ ಪ್ರಿಯಾಂಕಾ ಕಾಂಬಳೆ ಅವರು ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯಲ್ಲಿ 670ನೇ ರ‌್ಯಾಂಕ್ ಪಡೆದಿರುವುದು ನಮ್ಮ ಕಾಲೇಜಿಗೂ ಹೆಮ್ಮೆಯ ವಿಷಯ ಎಂದರು. ಪ್ರಿಯಾಂಕಾ ಸಾಧನೆಗೆ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದರು. ಪ್ರಿಯಾಂಕಾ ಕಾಂಬಳೆ ಅವರನ್ನು ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಪದವಿ ಕಾಲೇಜು ಪ್ರಾಚಾರ್ಯ ಉದಯಸಿಂಗ ರಜಪೂತ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.