ಮಣ್ಣು, ನೀರು ಸಮರ್ಪಕ ನಿರ್ವಹಣೆ ಅಗತ್ಯ

16 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರು ಕೃಷಿಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವಿಲ್ಲದೆ ಕೃಷಿ ಇಲ್ಲ ಎಂಬುದು ಕಟು ಸತ್ಯ. ಹೀಗಾಗಿ ಇವೆರಡನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಅಭಿಪ್ರಾಯಪಟ್ಟರು.
ನಗರದ ಜಲ ಮತ್ತು ನಿರ್ವಹಣಾ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂಸ್ಥೆಯ 38ನೇ ಸಂಸ್ಥಾಪನಾ ದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಣ್ಣು ನಿಸರ್ಗದತ್ತ ವಸ್ತು. ಸಾವಿರಾರು ವರ್ಷಗಳವರೆಗಿನ ಕಲ್ಲುಗಳ ಸವಕಳಿಯಿಂದ ಮಣ್ಣು ಉತ್ಪತ್ತಿಯಾಗುತ್ತದೆ. ಮಣ್ಣು ನೈಸರ್ಗಿಕ ಖನಿಜಗಳಿಂದ ಫಲವತ್ತತೆಯಿಂದ ಕೂಡಿದ್ದು, ಇಂತಹ ಅತ್ಯಮೂಲ್ಯ ಸಂಪತ್ತು ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಹೋಗುವ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಂಡು ಹೊಲಗಳಿಂದ ಫಲವತ್ತಾದ ಮಣ್ಣು ಹೊರಹೋಗದಂತೆ ಬದುಗಳನ್ನು ನಿರ್ಮಿಸಬೇಕು ಎಂದರು.
ಕೃವಿವಿಯ ನೀರು ನಿರ್ವಹಣಾ ಸಂಶೋಧನಾ ಕೇಂದ್ರದಲ್ಲಿ ನೀರಿನ ಸಮರ್ಪಕ ನಿರ್ವಹಣೆ ಬಗ್ಗೆ ನಿರಂತರ ಸಂಶೋಧನೆ ನಡೆದಿರುತ್ತವೆ. ವೈಜ್ಞಾನಿಕವಾಗಿ ನೀರಿನ ನಿರ್ವಹಣೆಯನ್ನು ಹೇಗೆ ಕೈಗೊಳ್ಳಬೇಕು ಎಂದು ರೈತರು ಅರಿತು ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ರಾಜೇಶ ಅಮ್ಮಿನಭಾವಿ ಮಾತನಾಡಿ, ನೈಸರ್ಗಿಕ ಜೀವ ಸಂಪನ್ಮೂಲಗಳಾದ ಜಲ ಮತ್ತು ನೆಲದ ನಿರ್ವಹಣೆ ರೈತರಿಗೆ ಮಾತ್ರ ಸೀಮಿತವಾಗಿಲ್ಲ. ಸಾರ್ವಜನಿಕರೂ ತಿಳಿವಳಿಕೆ ಪಡೆದು ರಕ್ಷಣೆ, ಸಮರ್ಪಕ ನಿರ್ವಹಣೆಗೆ ಮುಂದಾಗಬೇಕು ಎಂದರು.
ವಾಲ್ಮಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಹಿಂದಿನ ನಿರ್ದೇಶಕರು, ಸಿಬ್ಬಂದಿ, ಸಹಕರಿಸಿದ ರೈತರು, ಇಂಜಿನಿಯರ್ಸ್‌ಗೆ ಸನ್ಮಾನಿಸಲಾಯಿತು. ವಾಲ್ಮಿ ಸಮಾಲೋಚಕ ಡಾ. ವಿ.ಐ. ಬೆಣಗಿ, ಪ್ರೊ.ಬಿ.ವೈ. ಬಂಡಿವಡ್ಡರ, ಮಲಪ್ರಭಾ ಮತ್ತು ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ಇಂಜಿನಿಯರ್‌ಗಳು, ತುಂಗಾ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಡಿಯ ಶಿವಮೊಗ್ಗ ತಾಲೂಕಿನ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳು, ಇತರರು ಇದ್ದರು.
ಸಹಾಯಕ ನಿರ್ದೇಶಕ ಪ್ರಭಾಕರ ಹಾದಿಮನಿ ಸ್ವಾಗತಿಸಿದರು. ಪ್ರೊ. ಸುವರ್ಣಾ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾದೇವಗೌಡ ಹುತ್ತನಗೌಡ ನಿರೂಪಿಸಿದರು. ಪ್ರೊ.ಇಂದುಧರ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net