ಸಮರ್ಪಕ ಅನುಷ್ಠಾನಕ್ಕೆ ಕೈಜೋಡಿಸಿ

25 gvt 03
ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಪಂ ವ್ಯಾಪ್ತಿಯಲ್ಲಿ ಮಂಜೂರಾದ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ರಾಜೀವ್ ಗಾಂಧಿ ವಸತಿ ಯೋಜನೆ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಎಸ್.ಆಶಾ, ತಾಪಂ ಇಒ ಲಕ್ಷ್ಮೀ ದೇವಿ ಯಾದವ್, ಗ್ರಾಪಂ ಪಿಡಿಒಗಳಾದ ಬಸವರಾಜಗೌಡ, ವತ್ಸಲಾ, ಕೃಷ್ಣಪ್ಪ, ನಾಗೇಶ ಕುರ್ಡಿ, ಸುರೇಶ ಛಲವಾದಿ ಇತರರಿದ್ದರು.
Published on

ಗಂಗಾವತಿ: ಮಂಜೂರಾದ ಮನೆಗಳನ್ನು ಸಕಾಲಕ್ಕೆ ನಿರ್ಮಾಣ ಮಾಡಬೇಕಿದ್ದು, ವಸತಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ರಾಜೀವ್ ಗಾಂಧಿ ವಸತಿ ಯೋಜನೆ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಎಸ್.ಆಶಾ ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಪಂ ವ್ಯಾಪ್ತಿಯಲ್ಲಿ ಮಂಜೂರಾದ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ವಸತಿಹೀನರಿಗೆ ಮನೆ ನಿರ್ಮಿಸಿಕೊಳ್ಳುವ ಉದ್ದೇಶದಿಂದ ರಾಜೀವ್ ಗಾಂಧಿ ವಸತಿ ನಿಗಮ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಲಾಗಿದೆ. ಬಹುತೇಕ ಗ್ರಾಪಂಗಳಲ್ಲಿ ನಿರೀಕ್ಷಿತ ಗುರಿ ತಲುಪಿಲ್ಲ, ಜಾಗೃತಿಯೂ ಮೂಡಿಸುತ್ತಿಲ್ಲ. ಗುಡಿಸಲು ರಹಿತ ಗ್ರಾಮ ನಿರ್ಮಾಣಕ್ಕಾಗಿ ಪ್ರತಿ ವರ್ಷ ಮನೆಗಳು ಮಂಜೂರಾದರೂ ಶೇ.50ರಷ್ಟು ಮನೆ ನಿರ್ಮಿಸಲಾಗುತ್ತಿಲ್ಲ.

ಮನೆಗಳ ನಿರ್ಮಾಣದ ಬಗ್ಗೆ ಲಾನುಭವಿಗಳಿಗೆ ಅರಿವು ಮೂಡಿಸಬೇಕಿದ್ದು, ಯೋಜನೆಗಳನ್ನು ಮನೆಮನೆಗೆ ತಲುಪಿಸಬೇಕು.ಯೋಜನೆ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳನ್ನು ಗ್ರಾಪಂ ಸದಸ್ಯರ ಸಮ್ಮುಖದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕಿದ್ದು, ಸಭೆಗಳನ್ನು ಆಯೋಜಿಸಬೇಕು. ಸಕಾಲಕ್ಕೆ ಮನೆಗಳನ್ನು ನಿರ್ಮಿಸದಿದ್ದರಿಂದ ಕಳೆದ ವರ್ಷ ರಾಜ್ಯದಲ್ಲಿ 58ಸಾವಿರ ಮನೆಗಳು ವಾಪಸ್ ಆಗಿವೆ. ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಯೊಂದಿಗೆ ಸಂವಹನ ನಡೆಸಿ, ಇತ್ಯರ್ಥಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಅನುದಾನ ಮಂಜೂರು ವಿಳಂಬ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಮಸ್ಯೆ, ಲಾನುಭವಿಗಳ ನಿರ್ಲಕ್ಷ್ಯ ಸೇರಿ ಗ್ರಾಪಂ ಮಟ್ಟದಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಪಿಡಿಒಗಳು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net