ಶಿಕ್ಷಣ ನೀತಿಗಳ ಸಮರ್ಪಕ ಅನುಷ್ಠಾನ ಅಗತ್ಯ

1 - Copy
Published on

ಮೈಸೂರು: ಯಾವುದೇ ಶಿಕ್ಷಣ ನೀತಿಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ ಎಂದು ತುಮಕೂರು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಪಾತ್ರ’ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲ ಕಾಲಕ್ಕೆ ನಮ್ಮ ಸರ್ಕಾರಗಳು ಉಪಯುಕ್ತವಾದ ಶಿಕ್ಷಣ ನೀತಿಗಳನ್ನು ರೂಪಿಸುತ್ತಿವೆ. ಆದರೆ, ಆ ನೀತಿಗಳು ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ ಎಂದರು.


6 ವರ್ಷದ ಒಳಗಿನ ಮಕ್ಕಳು ಚುರುಕಾಗಿರುತ್ತಾರೆ. ಆ ಮಕ್ಕಳಿಗೆ ಶೇ.85ರಷ್ಟು ಮಿದುಳಿನ ಬೆಳವಣಿಗೆ ಆಗಿರುತ್ತದೆ. ಇಂತಹ ವೇಳೆ ಶಿಕ್ಷಕರು ಹಾಗೂ ಪಾಲಕರು ಅವರಿಗೆ ಬೇಕಾದ ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ನೀಡಿದರೆ, ಅವರ ಭವಿಷ್ಯ ಉತ್ತಮವಾಗಿರುತ್ತದೆ ಎಂದರು.
ಸಾಮಾನ್ಯ ಮಕ್ಕಳಿಗಿಂತ ವಿಶೇಷ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಶ್ಯಕತೆ ಇರುತ್ತದೆ. ನಾನು ವಿಕಲಾಂಗ ಎಂಬ ಸಂಕುಚಿತ ಭಾವನೆಯನ್ನು ಮಕ್ಕಳಲ್ಲಿ ತೊಡೆದು ಹಾಕಲು ಪಾಲಕರು ಹಾಗೂ ಶಿಕ್ಷಕರು ಶ್ರಮಿಸಬೇಕು ಎಂದರು.


ಮೈಸೂರು ವಿವಿ ಕುಲಸಚಿವರಾದ ವಿ.ಆರ್.ಶೈಲಜಾ ಮಾತನಾಡಿ, 30 ವರ್ಷಗಳಿಂದಲೂ ಈ ಸಂಸ್ಥೆಯನ್ನು ಹತ್ತಿರದಿಂದ ನೋಡಿದ್ದೇನೆ. ಇದು ಇಡೀ ದೇಶದಲ್ಲಿಯೇ ಮಾದರಿ ಸಂಸ್ಥೆ. ದೇಶದ ವಿವಿಧ ರಾಜ್ಯಗಳಿಂದ ಪಾಲಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕರೆತರುತ್ತಾರೆ. ವಿಶೇಷ ಮಕ್ಕಳಿಗೆ ಈ ಸಂಸ್ಥೆ ವರದಾನ ಎಂದರು. ಕಾರ್ಯಕ್ರಮದಲ್ಲಿ ಆಯಿಷ್ ನಿರ್ದೇಶಕಿ ಪ್ರೊ.ಪಿ.ಮಂಜುಳಾ, ಪ್ರಾಧ್ಯಾಪಕ ಡಾ.ಅಲೋಕ್ ಕುಮಾರ್ ಉಪಾಧ್ಯಾಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net